ADVERTISEMENT

ಯಗಟಿ: ಭೂಮಿ ಹರಾಜಿಗೆ ರೈತ ಸಂಘ ತಡೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 9:35 IST
Last Updated 1 ಮಾರ್ಚ್ 2012, 9:35 IST

ಕಡೂರು: ಯಗಟಿ ಶಾಖೆಯ ಕಾರ್ಪೊರೇಷನ್ ಬ್ಯಾಂಕ್ ರೈತ ರಾಜು ಎಂಬವರ ನಾಲ್ಕು ಎಕರೆ ಭೂಮಿಯನ್ನು ಹರಾಜು ನಡೆಸುತ್ತಿದ್ದ ಸಂದರ್ಭ ಕೊಪ್ಪ ರೈತ ಸಂಘ ಅಧ್ಯಕ್ಷ ನವೀನ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿ ಸಾಲ ವಸೂಲಿ ಕ್ರಮ ವಿರೋಧಿಸಿ ಧರಣಿ ನಡೆಸಿ ಹರಾಜು ಪ್ರಕ್ರಿಯೆ ನಿಲ್ಲಿಸಲಾಯಿತು ಎಂದು ರೈತ ಸಂಘ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ತಿಳಿಸಿದರು.

ತಾಲ್ಲೂಕಿನ ಯಗಟಿ ಗ್ರಾಮದಲ್ಲಿ ಬುಧವಾರ ರೈತನ ಭೂಮಿ ಹರಾಜು ಪ್ರಕ್ರಿಯೆ ನಿಲ್ಲಿಸಿ ಬ್ಯಾಂಕ್ ಮುಂದೆ ರೈತರ ಸಭೆ ನಡೆಸಿ ಅವರು ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದೆ. ಸರ್ಕಾರ ಈ ವರ್ಷ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಪರಿಸ್ಥಿತಿ ಹೀಗಿದ್ದರೂ ಬ್ಯಾಂಕ್‌ಗಳು ರೈತರ ಸಾಲ ವಸೂಲಿ ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಕೊಪ್ಪ ರೈತ ಸಂಘ ಅಧ್ಯಕ್ಷ ನವೀನ್ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರೈತರು ಪಡೆದ ಸಾಲವನ್ನು ವಸೂಲಿ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರ ಭೂಮಿ ನಡೆಸುವುದನ್ನು ರೈತ ಸಂಘ ಖಂಡಿಸುತ್ತದೆ ಎಂದರು.

ಬರಗಾಲದಲ್ಲಿ ರೈತರಿಗೆ ನೆರವಾಗಬೇಕಾದ ಯಗಟಿ ಕಾರ್ಪೊರೇಷನ್ ಬ್ಯಾಂಕ್ ರೈತ ರಾಜು ಅವರ ಟ್ರ್ಯಾಕ್ಟರ್ ಮಾರಾಟ ಮಾಡಿದ್ದಲ್ಲದೆ, ಉಳಿದ ಸಾಲಕ್ಕೆ ನಾಲ್ಕು ಎಕರೆ ಭೂಮಿಯನ್ನು ಹರಾಜು ಮಾಡಲು ಮುಂದಾಗಿರುವುದನ್ನು ಕಂಡರೆ ರೈತರನ್ನು ಬಲವಂತದಿಂದ ಸಾವಿನ ದವಡೆಗೆ ತಳ್ಳುವ ಪ್ರಯತ್ನವನ್ನು ಬ್ಯಾಂಕ್‌ಗಳು ನಡೆಸುತ್ತಿವೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸದಾನಂದ ಗೌಡ ಅವರು ಚಿಕ್ಕಮಗಳೂರಿನಲ್ಲಿ ಒಂದು ತಿಂಗಳ ಹಿಂದೆ ಯಾವುದೇ ರೈತರ ಭೂಮಿಯನ್ನು ಹರಾಜು ಮಾಡುವುದಕ್ಕೆ ನಮ್ಮ ಸರ್ಕಾರ ಬಿಡುವುದಿಲ್ಲ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೂ ಬ್ಯಾಂಕ್ ಅಧಿಕಾರಿಗಳಿಗೆ ಸಹನೆ, ಕರುಣೆ ಇಲ್ಲವೆ ಎಂದು ಪ್ರಶ್ನಿಸಿದರು.     
ಟ್ರಾಕ್ಟರ್ ಸಾಲ ಪಡೆದು ರೂ.3 ಲಕ್ಷಕ್ಕೂ ಹೆಚ್ಚು ಸಾಲ ತೀರಿಸಿದ್ದರೂ, ಟ್ರಾಕ್ಟರ್ ವಶಪಡಿಸಿಕೊಂಡು ಮಾರಾಟ ಮಾಡಿದ್ದಾರೆ. ಬ್ಯಾಂಕ್ ನಾಲ್ಕು ಎಕರೆ ಜಮೀನನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಿ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್ ಸಾಲ ವಸೂಲಿ ಮತ್ತು ಹರಾಜು ಪ್ರಕ್ರಿಯೆಯನ್ನು ಒಂದು ವರ್ಷ ಕಾಲ ಮುಂದೂಡಿರುವುದಾಗಿ ಘೋಷಿಸಿದ ನಂತರ ರೈತರು ಸ್ಥಳದಿಂದ ತೆರಳಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮಣಗೌಡ, ಗಿರಿರಾಜ, ಜಿಲ್ಲಾ ಮುಖಂಡ ಚನ್ನಬಸಪ್ಪ, ಹಾಲೇಶಪ್ಪ, ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.