ADVERTISEMENT

ಯುಗಾದಿ: ವ್ಯಾಪಾರ ವಹಿವಾಟು ನೀರಸ

‘ವ್ಯಾಪಾರವಿಲ್ಲ ಬರಬೇಡಿ, ನಮಗೂ ಒಂದು ಕಟ್ಟೆ ಹಿಡಿಯಿರಿ ಅಲ್ಲಿಗೇ ಬರುತ್ತೇವೆ’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 14:48 IST
Last Updated 5 ಏಪ್ರಿಲ್ 2019, 14:48 IST
ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯಲ್ಲಿ ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಶುಕ್ರವಾರ ತೆರೆಯಲಾಗಿದ್ದ ಹೂವು, ಹಣ್ಣಿನ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೇ ನೀರಸವಾಗಿತ್ತು.
ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯಲ್ಲಿ ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಶುಕ್ರವಾರ ತೆರೆಯಲಾಗಿದ್ದ ಹೂವು, ಹಣ್ಣಿನ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೇ ನೀರಸವಾಗಿತ್ತು.   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಯುಗಾದಿ ಹಬ್ಬದ ಖರೀದಿಯ ವ್ಯಾಪಾರ ವಹಿವಾಟಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಲೆ ಏರಿಕೆ ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗದ ಪ್ರಮಾಣ ಇಳಿಕೆಯಾಗಿರುವುದು ಹಬ್ಬ ಆಚರಣೆಯ ಸಡಗರವನ್ನು ಕಸಿದುಕೊಂಡಿದೆ ಎನ್ನಲಾಗಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಟ್ಟಡ ನಿರ್ಮಾಣ, ಕಾಫಿ ತೋಟದ ಚಟುವಟಿಕೆಗಳು ಕುಂಠಿತವಾಗಿರುವುದು ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಶುಕ್ರವಾರ ಪಟ್ಟಣದಲ್ಲಿ ವಾರದ ಸಂತೆ ನಡೆಯುತ್ತದೆ. ಆದರೆ, ಹಬ್ಬದ ವಾರದಲ್ಲೂ ಸಂತೆಯಲ್ಲಿ ಜನರಿಲ್ಲದೇ ವರ್ತಕರು ತಂದಿದ್ದ ಸರಕುಗಳು ಸಂಜೆವರೆಗೂ ವ್ಯಾಪಾರವಾಗದೇ ಉಳಿದಿದ್ದವು.

ವ್ಯಾಪಾರ ಕುಂಠಿತವಾಗಿದ್ದನ್ನು ಕಂಡ ಕೆಲವು ವರ್ತಕರು ಮಧ್ಯಾಹ್ನ ವೇಳೆಗೆ ತಮ್ಮ ಸರಕುಗಳೊಂದಿಗೆ ಚಿಕ್ಕಮಗಳೂರು, ಬೇಲೂರಿನತ್ತ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು. ಮತ್ತೆ ಕೆಲವು ವರ್ತಕರು ‘ವ್ಯಾಪಾರವಿಲ್ಲ ಬರಬೇಡಿ, ನಮಗೂ ಒಂದು ಕಟ್ಟೆ ಹಿಡಿಯಿರಿ ನಾವೂ ಅಲ್ಲಿಗೇ ಬರುತ್ತೇವೆ’ ಎಂದು ಮೊಬೈಲ್ ನಲ್ಲಿ ಸಂಭಾಷಿಸುತ್ತಿದ್ದ ದೃಶ್ಯಗಳು ತಾಲ್ಲೂಕಿನಲ್ಲಿ ವಹಿವಾಟು ಕುಂಠಿತವಾಗಿರುವುದಕ್ಕೆ ಸಾಕ್ಷಿಯಾಗಿತ್ತು.

ADVERTISEMENT

‘ಪ್ರತಿ ವರ್ಷ ಮಧ್ಯಾಹ್ನದ ವೇಳೆಗೆ ವ್ಯಾಪಾರ ಜೋರಾಗಿರುತ್ತಿತ್ತು. ಗ್ರಾಮೀಣ ಭಾಗದಿಂದ ಬರುತ್ತಿದ್ದ ಗ್ರಾಹಕರು ಸಂಜೆಯೊಳಗಾಗಿ ಖರೀದಿಸುತ್ತಿದ್ದರು. ಆದರೆ, ಸ್ವಾಮಿ ಮುಳುಗೊ ಹೊತ್ತಾದರೂ ಕಾಲುಭಾಗ ಹೂವು ಖಾಲಿಯಾಗಿಲ್ಲ. ಹಬ್ಬದ ವ್ಯಾಪಾರಕ್ಕಾಗಿಯೇ ಸೇವಂತಿಗೆ ತೋಟಗಳನ್ನು ಮಾಡಿಕೊಂಡಿದ್ದು, ಮನೆಯಲ್ಲಿ ಇನ್ನೂ ಮೂರರಷ್ಟು ಹೂವು ಹಾಗೇ ಇದೆ. ಇಂತಹ ವ್ಯಾಪಾರವನ್ನು ಜೀವನದಲ್ಲಿಯೇ ಕಂಡಿರಲಿಲ್ಲ’ ಎಂದು ಬೇಲೂರಿನಿಂದ ಹೂವು ಮಾರಲು ಬಂದಿದ್ದ ರಾಜಣ್ಣ ಅಳಲು ತೋಡಿಕೊಂಡರು.

‘ಕಳೆದ ಬಾರಿ ಉಂಟಾಗಿದ್ದ ಅತಿವೃಷ್ಟಿಯಿಂದ ಕಾಫಿ ಬೆಳೆ ಸಂಪೂರ್ಣ ನೆಲ ಕಚ್ಚಿತ್ತು. ತಾಲ್ಲೂಕಿನಲ್ಲಿ ಕಾಫಿ ಬೆಳೆ ಸಮರ್ಪಕವಾಗದಿದ್ದರೆ ಆರ್ಥಿಕ ವಹಿವಾಟು ಕಷ್ಟವಾಗುತ್ತದೆ. ಕಳೆದ ನವೆಂಬರ್‌ನಿಂದಲೇ ವ್ಯಾಪಾರ ಕುಂಠಿತವಾಗಿದ್ದು, ಹಬ್ಬದ ವ್ಯಾಪಾರವೂ ಹೇಳಿಕೊಳ್ಳುವ ಹಾಗಿಲ್ಲ’ ಎನ್ನುತ್ತಾರೆ ಬಟ್ಟೆ ವ್ಯಾಪಾರಿ ಮಧುಸೂದನ್.

ಹಣದ ಹರಿವಿನ ಕುಂಠಿತ ಹಬ್ಬ ಹರಿದಿನಗಳನ್ನು ದೂರ ಮಾಡುತ್ತಿದೆಯೋ ಅಥವಾ ಆಧುನಿಕತೆ ಬೆಳೆದಂತೆ ಹಬ್ಬ ಹರಿದಿನಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆಯೋ ಒಟ್ಟಿನಲ್ಲಿ ಈ ಭಾರಿಯ ಯುಗಾದಿಯು ವ್ಯಾಪಾರ ವಹಿವಾಟಿನ ಮೇಲೆ ಬೆಲ್ಲಕ್ಕಿಂತ ಹೆಚ್ಚಾಗಿ ಬೇವಿನ ಅನುಭವವನ್ನೇ ನೀಡಿದೆ.

ಗ್ರಾಹಕರಿಗೆ ತುಸು ಕಹಿ ಅನುಭವ

ಕಡೂರು: ಯುಗಾದಿ ಹಬ್ಬದ ಮುನ್ನಾದಿನ ಕಡೂರು ಪಟ್ಟಣದಲ್ಲಿ ಹೂವು ಹಣ್ಣು ಮುಂತಾದ ವ್ಯಾಪಾರ ಜೋರಾಗಿ ನಡೆಯಿತು. ಬೆಲೆ ಹೆಚ್ಚಿದ್ದರಿಂದ ಗ್ರಾಹಕರು ತುಸು ಕಹಿ ಅನುಭವಿಸಿದರು.

ಹಬ್ಬಕ್ಕೆ ಅಗತ್ಯವಾದ ಮಾವಿನ ಸೊಪ್ಪು ಮತ್ತು ಬೇವಿನ ಸೊಪ್ಪು ಒಂದು ಕುಚ್ಚಿಗೆ ₹10 ಬೆಲೆ ಇದ್ದರೆ ಬಾಳೆಕಂದು ಒಂದು ಜೊತೆಗೆ ₹30, ಸೇವಂತಿಗೆ ಹೂವು ಒಂದು ಮಾರಿಗೆ ₹50, ಮಲ್ಲಿಗೆ ಹೂವು ₹60, ಕಲರ್ ಸೇವಂತಿಗೆ ₹40ಕ್ಕೆ ಮಾರಾಟವಾಯಿತು.

ಯುಗಾದಿಯ ಹಿಂದಿನ ದಿನ ಅಮಾವಾಸ್ಯೆ ಆಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಜೋಯಿಸರಿಗೆ ನವಗ್ರಹ ಧಾನ್ಯಗಳನ್ನು ದಾನ ಕೊಡುವ ಪದ್ಧತಿ ಇದೆ. ಶುಕ್ರವಾರ ಬೆಳಗಿನ ಜಾವ 2 ಗಂಟೆಯಿಂದಲೇ ಅವರನ್ನು ಮನೆಗೆ ಕರೆದು ನವಗ್ರಹ ಧಾನ್ಯಗಳನ್ನು ದಾನ ನೀಡುತ್ತಿದ್ದ ದೃಶ್ಯ ಗ್ರಾಮೀಣ ಭಾಗದಲ್ಲಿ ಕಂಡು ಬಂದಿತು.

ಪಟ್ಟಣದಲ್ಲಿ ಶನಿ ದೇವರ ದೇವಸ್ಥಾನದ ಬಳಿ ಜೋಯಿಸರಿಗೆ ದಾನ ನೀಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.