ADVERTISEMENT

ರೈತರಲ್ಲಿ ಭರವಸೆ ಮೂಡಿಸಿದ ಕಾಳುಮೆಣಸು

ಏರಿದ ಬೆಲೆ: ಉತ್ತಮ ಫಸಲಿನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 9:57 IST
Last Updated 17 ಜುಲೈ 2013, 9:57 IST
ಕಳಸದ ಕಾಫಿ ತೋಟದಲ್ಲಿ ಉಪ ಬೆಳೆಯಾಗಿರುವ ಕಾಳುಮೆಣಸಿನ ಬಳ್ಳಿಯಲ್ಲಿ ಹೂಗೆರೆಗಳು ಮೂಡಿರುವ ದೃಶ್ಯ.
ಕಳಸದ ಕಾಫಿ ತೋಟದಲ್ಲಿ ಉಪ ಬೆಳೆಯಾಗಿರುವ ಕಾಳುಮೆಣಸಿನ ಬಳ್ಳಿಯಲ್ಲಿ ಹೂಗೆರೆಗಳು ಮೂಡಿರುವ ದೃಶ್ಯ.   

ಕಳಸ: ಸಾಂಬಾರ ರಾಜ ಕಾಳುಮೆಣಸಿನ ಬೆಲೆ ಕಿಲೋಗೆ 380 ರೂಪಾಯಿಯ ಆಸುಪಾಸಿಗೆ ಏರಿದೆ. ಜೊತೆಗೆ ಕಳೆದ ತಿಂಗಳಿನಿಂದ ಸತತ ಸುರಿದ ಮಳೆಯೂ ಕಾಳುಮೆಣಸಿನ ಬಳ್ಳಿಗಳಲ್ಲಿ ನವಚೈತನ್ಯ ಮೂಡಿಸಿದೆ.

ಈ ವರ್ಷದ ಬೇಸಿಗೆಯಲ್ಲಿ ಮಳೆಯ ಕೊರೆತೆಯಿಂದಾಗಿ ಸೊರಗಿದ್ದ ಬಳ್ಳಿಗಳು ಈಗ ಮತ್ತೆ ಕಸುವು ತುಂಬಿಕೊಂಡಿವೆ. ಆರೋಗ್ಯ ಪೂರ್ಣ ಬಳ್ಳಿಗಳಲ್ಲಿ ಹೂಗೆರೆಗಳು ಮೂಡುತ್ತಿದ್ದು ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿದೆ.

ಕಾಫಿ ತೋಟದಲ್ಲಿ ನಿರ್ವಹಣಾ ಖರ್ಚು ಜಾಸ್ತಿ ಆದ ಮೇಲೆ ಉಪಬೆಳೆಯ ಪ್ರಾಮುಖ್ಯತೆ ಹಿಂದೆಂದಿಗಿಂತ ಹೆಚ್ಚಿದೆ. ತೋಟದ ನಿರ್ವಹಣೆಗೆ ಮೆಣಸಿನ ಆದಾಯ ಸರಿತೂಗಿಸಿದರೆ ಉಳಿದ ಕಾಫಿ ಉತ್ಪತ್ತಿಯನ್ನು ಆದಾಯ ಎಂದು ಪರಿಗಣಿಸಬಹುದು ಎಂಬ ಲೆಕ್ಕಾಚಾರ ಬೆಳೆಗಾರರಲ್ಲಿ ಇದೆ.

`ಕಾಳುಮೆಣಸು ಬೆಳೆಯುವ ಕ್ರಮ ಬೇರೆ ಇದೆ. ಹೆಚ್ಚಿನ ತೋಟಗಳಲ್ಲಿ ಬರೀ ಫಸಲು ಕೊಯ್ಯುವುದನ್ನು ಮಾತ್ರ ಮಾಡುತ್ತೇವೆ. ಆದರೆ ಕೆಲ ಪ್ರಗತಿಪರ ಕೃಷಿಕರು ಬೇಸಿಗೆಯಲ್ಲಿ ಬಳ್ಳಿಗಳಿಗೆ ಸತತ ನೀರು ನೀಡುತ್ತಾರೆ.

ಸಾವಯವ ಗೊಬ್ಬರದ ಜೊತೆಗೆ  ಬೇವಿನಹಿಂಡಿ, ಟ್ರೈಕೋಡರ್ಮಾ ನೀಡಿ ಬಳ್ಳಿಯ ಆರೋಗ್ಯ ಕಾಪಾಡುತ್ತಾರೆ.ಟನ್‌ಗಟ್ಟಲೆ ಮೆಣಸು ಬೆಳೆಯುತ್ತಾರೆ' ಎಂದು ಕುಂಬಳಡಿಕೆಯ ಬೆಳೆಗಾರ ರಾಘವೇಂದ್ರ  ಹೇಳುತ್ತಾರೆ.

`ಮೆಣಸಿಗೆ ಈಗ ಇರುವ ಧಾರಣೆ ಚೆನ್ನಾಗಿಯೇ ಇದೆ. ಆದರೆ ರೊಬಸ್ಟಾ ಕಾಫಿ ಚೆರ‌್ರಿಗೆ ಮಾತ್ರ ಚೀಲಕ್ಕೆ 3500 ರೂಪಾಯಿ ಬೆಲೆ ಸಿಗಬೇಕು'ಎಂದು ಮತ್ತೊಬ್ಬ ಬೆಳೆಗಾರ ಬಿಳಲ್‌ಗೋಡು ಧರ್ಮಸಾಮ್ರಾಜ್ಯ ಹೇಳುತ್ತಾರೆ.

ಈಗ ಮೆಣಸಿನ ಬಳ್ಳಿಗಳಲ್ಲಿ ಮೂಡಿರುವ ಹೂಗೆರೆಗಳು ಫಸಲಾಗಿ ಪರಿವರ್ತನೆ ಆಗುವ ಮುನ್ನ ಸೊರಗು ರೋಗ ಬಾಧಿಸದಿರಲಿ ಎಂದು ಬೆಳೆಗಾರರು ಹಾರೈಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಉತ್ತಮ ಫಸಲಿನ ನಿರೀಕ್ಷೆ ಇರುವುದರಿಂದ ಬೆಳೆಗಾರರು ಮೆಣಸಿನ ಬಳ್ಳಿಗಳಿಗೆ ಬೋರ್ಡೊ ಮಿಶ್ರಣ ಸಿಂಪಡಣೆ ಮಾಡುವ ಕೆಲಸವನ್ನೂ ಈ ಬಾರಿ ಮಾಡುತ್ತಿದ್ದಾರೆ.

ಮುಂದಿನ ವರ್ಷಗಳಲ್ಲಿ ಹೆಚ್ಚು ಮೆಣಸಿನ ಫಸಲು ಸಿಗುವಂತಾಗಲಿ ಎಂದು ಹೊಸದಾಗಿ ಬಳ್ಳಿಗಳನ್ನು ನೆಡುವ ಕೆಲಸವೂ ಚುರುಕಾಗಿ ಸಾಗಿದೆ.
- ರವಿ ಕೆಳಂಗಡಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT