ADVERTISEMENT

ರೈಲು ನಿಲ್ದಾಣದಲ್ಲಿ ಮದ್ಯದಂಗಡಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 9:50 IST
Last Updated 4 ಜುಲೈ 2017, 9:50 IST
ಬೀರೂರು ಪಟ್ಟಣದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಭಾನುವಾರದಿಂದ ಆರಂಭವಾಗಿರುವ ಮದ್ಯದಂಗಡಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ ಅಬಕಾರಿ ಇನ್‌ಸ್ಪೆಕ್ಟರ್‌ಗೆ ಮನವಿ ಅರ್ಪಿಸಿದರು.
ಬೀರೂರು ಪಟ್ಟಣದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಭಾನುವಾರದಿಂದ ಆರಂಭವಾಗಿರುವ ಮದ್ಯದಂಗಡಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ ಅಬಕಾರಿ ಇನ್‌ಸ್ಪೆಕ್ಟರ್‌ಗೆ ಮನವಿ ಅರ್ಪಿಸಿದರು.   

ಬೀರೂರು: ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಪಟ್ಟಣದ ಒಳಗಿನಿಂದ ಸ್ಥಳಾಂತರಗೊಳ್ಳುತ್ತಿರುವ ಎರಡು ಮದ್ಯ ದಂಗಡಿಗಳು ರೈಲ್ವೆ ಸ್ಟೇಷನ್‌ ಮುಂಭಾಗ ಭಾನುವಾರ ದಿಢೀರ್‌ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕ ಅಭಿಪ್ರಾಯಕ್ಕೆ ಜಿಲ್ಲಾಡಳಿತ ಮನ್ನಣೆ ನೀಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಮತ್ತು ಕ್ರಿಸ್ತಶರಣ ಆಶ್ರಮ ಮತ್ತು ಶಾಲಾ ಸಿಬ್ಬಂದಿ ಸೋಮ ವಾರ ಪ್ರತಿಭಟನೆ ನಡೆಸಿದರು.

‘ಪಟ್ಟಣದ ರಾಜಾಜಿನಗರ ಮತ್ತು ಭಾಗವತ್‌ ನಗರಗಳಿಗೆ ತೆರಳುವ ಮುಖ್ಯ ರಸ್ತೆ ಇದಾಗಿದೆ. ಇಲ್ಲಿ ಆ ವೇಳೆ ಯಲ್ಲಿಯೂ ಯಾವುದೇ ಭಯ ವಿಲ್ಲದೆ ಸಂಚರಿಸಬಹುದಿತ್ತು. ನೂರಾರು ಮಹಿಳೆಯರು, ಪುರುಷರು ನಿತ್ಯ ಇಲ್ಲಿ ವಾಯು ವಿಹಾರ ನಡೆಸುತ್ತಿದ್ದು ಮದ್ಯದಂಗಡಿ ಸ್ಥಾಪನೆ ಯಿಂದ ಶಾಂತಿಭಂಗ ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಆಗಲಿದೆ’ ಎಂದು ಆರೋಪಿಸಿದರು.

ಇಲ್ಲಿ ಅಂಗಡಿ ಆರಂಭಕ್ಕೆ ಅನುಮತಿ ನೀಡದಂತೆ ಕಳೆದ ಏಪ್ರಿಲ್‌  ಮೊದಲ ವಾರದಲ್ಲಿಯೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬೀರೂರು ಪ್ರಮುಖ ರೈಲ್ವೆ ಜಂಕ್ಷನ್‌ ಆಗಿದ್ದು, ನಿಲ್ದಾಣದ ಹತ್ತಿರ ದಲ್ಲಿಯೇ ಕ್ರಿಸ್ತಶರಣ ಆಶ್ರಮ ಮತ್ತು ವಿದ್ಯಾಲಯ, ಏಸುಬಾಲರ ದೇವಾಲಯ, ಬಿಇಒ ಕಚೇರಿ, ಕೆಎಲ್‌ಕೆ ಪ್ರೌಢ ಶಾಲೆ ಮತ್ತು ಹೆದ್ದಾರಿ ಇದೆ. ಕಡೂರಿನ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಮಹಿಳೆಯರು, ರೈಲು ಮೂಲಕ ಬಂದು ಪರಸ್ಥಳಕ್ಕೆ ತೆರ ಳುವ ಸಾವಿರಾರು ಮಂದಿ ಉದ್ಯೋಗಿ ಗಳು, ಪ್ರಯಾಣಿಕರು ಇನ್ನು ಮುಂದೆ ಇಲ್ಲಿ ಸಂಚರಿಸಲು ಭಯಪಡುವಂತಾಗಿದೆ’ ಎಂದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಾಲ್ಲೂಕು ಅಬಕಾರಿ ಇನ್‌ಸ್ಪೆಕ್ಟರ್ ನೌಷಾದ್‌ ಅಹಮದ್‌ ಖಾನ್‌, ನಾಗರಿಕ ರಿಂದ ಮನವಿ ಸ್ವೀಕರಿಸಿ, ‘ನಾನೊಬ್ಬ ತಾಲ್ಲೂಕು ಮಟ್ಟದ ಅಧಿಕಾರಿಯಾಗಿದ್ದು, ಮೇಲಧಿ ಕಾರಿಗಳ ಆದೇಶ ಪಾಲಿಸ ಬೇಕಿದೆ. ಜಿಲ್ಲಾಧಿಕಾರಿಗಳೇ ಅನುಮತಿ ನೀಡಿರು ವುದರಿಂದ ನಾನು ಇಲ್ಲಿ ತೀರ್ಮಾನ ಕೊಡಲು ಬರುವುದಿಲ್ಲ, ನಿಮ್ಮ ಅಹವಾಲನ್ನು ಜಿಲ್ಲಾಧಿಕಾರಿ ಮತ್ತು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ಪುರಸಭೆ ಸದಸ್ಯ ಮಾರ್ಗದ ಮಧು ಮಾತನಾಡಿ, ಸಾರ್ವಜನಿಕರ ಅಸಹಕಾರ ಇದ್ದಲ್ಲಿ ಅಂಗಡಿ ಆರಂಭಿಸಲು ಅನುಮತಿ ಕೊಡುವುದಿಲ್ಲ ಎಂದು ಕಳೆದ ವಾರವಷ್ಟೇ ತಿಳಿಸಿದ್ದಿರಿ. ಜನವಸತಿ ಪ್ರದೇಶ ಗಳಲ್ಲಿ ಅಂಗಡಿ ಆರಂಭಿಸಲು ಅನುಮತಿ ಕೊಡುವ ಬದಲು ಪಟ್ಟಣದ ಹೊರ ಭಾಗದಲ್ಲಿ ಒಂದು ಮದ್ಯಪಾನ ವಲಯ ಸ್ಥಾಪಿಸುವುದು ಸೂಕ್ತ. 

ಮದ್ಯಪಾನಕ್ಕೆ ಹೇಗೆ ಅನುಮತಿ ಕೊಡುತ್ತೀರಿ? ಎಂದು ಪ್ರಶ್ನಿಸಿದ್ದಕ್ಕೆ, ಇಲ್ಲಿ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆಯೇ ಹೊರತು ಮದ್ಯಪಾನ ಮಾಡಲು ಅಲ್ಲ ಎಂದು ಅಬಕಾರಿ ಇನ್‌ಸ್ಪೆಕ್ಟರ್‌ ತಿಳಿಸಿದರು.

ಪ್ರತಿಭಟನೆಯಲ್ಲಿ ಕ್ರಿಸ್ತಶರಣ ಆಶ್ರಮದ ತಾರಾ ಸೆರಾವೊ, ಭಾರತಿ, ಮುಕ್ತಿಲೋಬೊ, ಪುರಸಭಾ ಸದಸ್ಯ ರಾದ ಎಂ.ಪಿ.ಸುದರ್ಶನ್‌, ಬಿ.ಕೆ. ಶಶಿ ಧರ್‌, ಎಸ್‌.ಎಸ್‌.ದೇವರಾಜ್‌, ವಿಜ ಯೇಂದ್ರಬಾಬು, ಸ್ಥಳೀಯರಾದ ಸಿ.ಆರ್‌. ಚಂದ್ರಶೇಖರ್‌, ಕೆ.ಎನ್‌. ಚಂದ್ರ ಶೇಖರ್‌, ಸಿದ್ಧವೀರಸ್ವಾಮಿ, ಕೆ.ಎಸ್‌. ಸೋಮಶೇಖರ್‌, ಎಲ್‌.ಎನ್‌.ಶಶಿ ಕುಮಾರ್‌ ಇದ್ದರು.

* * 

ಮದ್ಯದಂಗಡಿ ತೆರವು ಮಾಡುವಂತೆ ಜಿಲ್ಲಾಧಿಕಾರಿಗಳು ವೈನ್‌ಸೆಂಟರ್‌ ಮಾಲೀಕರಿಗೆ ನೋಟಿಸ್‌ ನೀಡಿದ್ದು, ಚಿಕ್ಕಮಗಳೂರಿಗೆ ಬರುವಂತೆ ತಿಳಿಸಿದ್ದಾರೆ.
ನೌಷಾದ್‌ ಅಹಮದ್‌ ಖಾನ್‌
ಅಬಕಾರಿ ಇನ್‌ಸ್ಪೆಕ್ಟರ್‌, ಕಡೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.