ADVERTISEMENT

ವಿಜ್ಞಾನ್ ಇಂಡಸ್ಟ್ರೀಸ್ ಕಾರ್ಮಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 8:05 IST
Last Updated 2 ಆಗಸ್ಟ್ 2012, 8:05 IST

ತರೀಕೆರೆ: ವಿಜ್ಞಾನ್ ಇಂಡಸ್ಟ್ರೀಸ್‌ನ ಆಡಳಿತವರ್ಗ ಮತ್ತು ಕಂಪೆನಿಯ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕರಿಗೆ ಕಾನೂನುಬದ್ಧವಾಗಿ ಕೊಡಬೇಕಾದ ಸೌಲಭ್ಯವನ್ನು ನೀಡದೆ ಅವರನ್ನು ಶೋಷಣೆಗೆ ಒಳಪಡಿಸುತ್ತಿದ್ದಾರೆ ಎಂದು ವಿಜ್ಞಾನ್ ಇಂಡಸ್ಟ್ರೀಸ್ ವರ್ಕರ್ಸ್‌ ಯೂನಿಯನ್ ಅಧ್ಯಕ್ಷ ಎಸ್.ಎ.ನಜೀರ್ ಆಹ್ಮದ್ ಆರೋಪಿಸಿದರು.

ಪಟ್ಟಣದ ಹೊರ ವಲಯದಲ್ಲಿರುವ ವಿಜ್ಞಾನ್ ಇಂಡಸ್ಟ್ರೀಸ್ ಕಂಪೆನಿಯ ಮುಂಭಾಗದಲ್ಲಿ ಬುಧವಾರ ಗುತ್ತಿಗೆ ಕಾರ್ಮಿಕರು ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಮಿಕರ ಭದ್ರತೆ ಕುರಿತು ಕಂಪೆನಿಯ ಆಡಳಿತ ಮಂಡಳಿ  ಮಾತುಕತೆ ನಡೆಸಲು ಸಿದ್ಧರಿಲ್ಲ ಎಂದು ದೂರಿದ ಅವರು, ಈ ಹಿಂದೆ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಮುಂದೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನೀಡುವಲ್ಲಿ ಆಡಳಿತ ಮಂಡಳಿ ನಿರಾಕರಿಸಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು.

ವಿಜ್ಞಾನ್ ಇಂಡಸ್ಟ್ರೀಸ್‌ನಲ್ಲಿ ಗುತ್ತಿಗೆ ಕಾರ್ಮಿಕರಿಗೆ ಜೀವಕ್ಕೆ ಯಾವುದೆ ಭದ್ರತೆಯಿಲ್ಲ , ಶಿರಸ್ತ್ರಾಣ ನೀಡುವುದಿಲ್ಲ. ಕಾರ್ಮಿಕರಿಗೆ ನೀಡುವ ಊಟ-ತಿಂಡಿ ವಿಚಾರದಲ್ಲೂ ತಾರತಮ್ಯ ತೋರುತ್ತಿದೆ ಎಂದು ಹೇಳಿದ ಅವರು, ಅಪಘಾತ ಸಂಭವಿಸಿದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕೈ ತೊಳೆದುಕೊಳ್ಳುವ ಆಡಳಿತ ಮಂಡಳಿ ನಂತರ ಕಾರ್ಮಿಕರತ್ತ ತಿರುಗಿ ನೋಡುವುದಿಲ್ಲ ಎಂದು ಅವರು ಅಲವತ್ತುಕೊಂಡರು.

ಗುತ್ತಿಗೆ ಕಾರ್ಮಿಕರ ಸಂಘಟನೆಗೆ ಆಡಳಿತವರ್ಗ ಮಾನ್ಯತೆ ನೀಡಬೇಕು. ಅನಗತ್ಯವಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು, ಸರ್ಕಾರ ನಿಗದಿ ಪಡಿಸಿದ ದಿನದಂದು ವೇತನ ಪಾವತಿಸಬೇಕು ಮತ್ತು ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಮುಂದೆ ಮಂಡಿಸಿದ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸುವವರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದರು.

ವಿಜ್ಞಾನ್ ಇಂಡಸ್ಟ್ರೀಸ್ ವರ್ಕರ್ಸ್‌  ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಜಿ.ಶ್ರೀನಿವಾಸ್, ಭದ್ರಾವತಿಯ ಬಾಲಾಜಿ ಆಯಿಲ್ ಫಾರಂ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಜಿ.ರವಿಕುಮಾರ್ ಮತ್ತು 200ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.