ADVERTISEMENT

ವಿದ್ಯಾರ್ಥಿನಿ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 10:05 IST
Last Updated 6 ಫೆಬ್ರುವರಿ 2012, 10:05 IST

ತರೀಕೆರೆ: ಪಟ್ಟಣದ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು 1995ರ ಸಾಲಿನಿಂದ ಉತ್ತಮ ಫಲಿತಾಂಶವನ್ನು ನೀಡುತ್ತಾ ಬಂದಿದ್ದು,  ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಕಾಲೇಜಿನ ಪ್ರಾಚಾರ್ಯ ಎನ್.ಡಿ.ನಾಗರಾಜ್ ತಿಳಿಸಿದರು.

ಇಲ್ಲಿ ಕಾಲೇಜು ಆವರಣದಲ್ಲಿ ಶನಿವಾರ ಪ್ರತಿಭಾ ವಿಕಾಸ ವೇದಿಕೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ರಾಜ್ಯ, ಅಂತರ ರಾಜ್ಯ ಮತ್ತು ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವುದು ಹೆಮ್ಮೆಯ ಸಂಗತಿ..ಸಾಂಸ್ಕೃತಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಹೆಸರು ಗಳಿಸಿದ್ದಾರೆ ಎಂದರು.

ಪ್ರತಿಭಾ ಪುರಸ್ಕಾರ ವಿತರಿಸಿ ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಉಮಾಪ್ರಕಾಶ್ ಮಾತನಾಡಿ, ಇಲ್ಲಿನ ವಿದ್ಯಾರ್ಥಿನಿಯರು ಕೇವಲ ವಿದ್ಯೆ ಕಲಿಯುವುದಕ್ಕೆ ಮಾತ್ರ ಮೀಸಲಾಗದೆ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಆಕಾಶವಾಣಿ ಕಲಾವಿದೆ ಮುಗಳಿ ಲಕ್ಷ್ಮಿದೇವಮ್ಮ ಜಾನಪದ ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು. ವಿದ್ಯಾರ್ಥಿನಿಯರು ಭರತನಾಟ್ಯ, ಮತ್ತಿತರೆ ನೃತ್ಯ ರೂಪಕವನ್ನು ಪ್ರದರ್ಶಿಸುವ ಮೂಲಕ ಪ್ರತಿಭೆ ತೋರಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶೋಧರ ಮೂರ್ತಿ, ಸದಸ್ಯೆ ನಾಗಲಕ್ಷ್ಮಿ ನಾಗಭೂಷಣ್, ಪುರಸಭಾ ಸದಸ್ಯ ಸದಾನಂದ, ಕಾಲೇಜಿನ ಉಪನ್ಯಾಸಕರು ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.