ADVERTISEMENT

ವಿದ್ಯುತ್ ಸಂಪರ್ಕ ನೀಡಲು ಸೂಚನೆ

ತರೀಕೆರೆ: ತಾ.ಪಂ. ಸಾಮಾನ್ಯ ಸಭೆಯಲ್ಲಿ ಇ.ಒ.ದೇವರಾಜಪ್ಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:49 IST
Last Updated 6 ಡಿಸೆಂಬರ್ 2012, 6:49 IST

ತರೀಕೆರೆ: ತಾಲ್ಲೂಕಿನ ಹರಬಲ ಮತ್ತು ಭೂತನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೂಡಲೆ ಯಾವುದೇ ಸಬೂಬು ಹೇಳದೇ ವಿದ್ಯುತ್ ಸಂಪರ್ಕ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ದೇವರಾಜಪ್ಪ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಶು ಸಂಗೋಪನಾ ಇಲಾಖೆಯಿಂದ ಉಚಿತ ಜಾನುವಾರು ವಿತರಣಾ ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ತಾಲ್ಲೂಕು ಪಂಚಾಯಿತಿ ಅನುಮೋದನೆ ಪಡೆಯದೆ ರಾಸುಗಳನ್ನು ವಿತರಿಸಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಅನ್ಬು ಆಪಾದಿಸಿದರು. ಮುಂದೆ ಇಂತಹ ಪ್ರಮಾದಗಳು ನಡೆಯದಂತೆ ನೋಡಿಕೊಳ್ಳುವಂತೆ ಕಾರ್ಯನಿವಾಹಣಾಧಿಕಾರಿಗಳು ತಾಕೀತು ಮಾಡಿದರು.

ತಣಿಗೇಬೈಲು ಮತ್ತು ಧೂಪದಖಾನ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಾರಕ್ಕೆರಡು ದಿನ ಶಾಲೆಗೆ ಗೈರು ಹಾಜರಾಗುತ್ತಿದ್ದರೂ ಬೀರೂರು ವಲಯದ ಶಿಕ್ಷಣಾಧಿಕಾರಿಗಳು ಶಿಸ್ತುಕ್ರಮ ಜರುಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸದಸ್ಯ ಬಿ.ಆರ್.ರವಿ ಮತ್ತು ತಿಗಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನೋಹರ್ ದೂರಿದರು. ಮೂರು ಬಾರಿ ಈ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಿದ್ದು, ಪ್ರಸ್ತುತ ಶಿಕ್ಷಕರು ಈಗ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಶಿಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.

ಲಕ್ಕವಳ್ಳಿ ಹೋಬಳಿಯ ಭದ್ರಾ ಬಲದಂಡೆ ನಾಲೆಯಿಂದ ಬಾವಿಕೆರೆ ಗ್ರಾಮಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯನ್ನು ಪಂಚಾಯತ್ ರಾಜ್ ವತಿಯಿಂದ ನಿರ್ಮಿಸಿದ್ದರೂ 13ನೇ ಹಣಕಾಸು ಯೋಜನೆಯಲ್ಲಿ ಇದೆ ಕಾಮಗಾರಿಯನ್ನು ಮರು ನಿರ್ಮಾಣ ಮಾಡಲಾಗಿದೆ ಎಂದು ಸದಸ್ಯ ಸೀತಾರಾಮ ಆಕ್ಷೇಪಿಸಿದರು. ಕಡತಗಳನ್ನು ಪರಿಶೀಲಿಸಿ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವಂತೆ ಪಂಚಾಯತ್‌ರಾಜ್ ಇಲಾಖೆಯ ಎಇಇ ಅವರಿಗೆ ಅಧ್ಯಕ್ಷೆ ದೀಪಾ ಉಮೇಶ್ ಸೂಚಿಸಿದರು.

ಬೇಗೂರಿನಲ್ಲಿ ವೈದ್ಯರ ಕೊರತೆಯಿದ್ದು, ಜನತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನಗತ್ಯವಾಗಿ ಹತ್ತಾರು ಕಿಲೋ ಮೀಟರ್ ಸಂಚರಿಸಬೇಕಿದೆ ಎಂದು ಸದಸ್ಯೆ ರತ್ನಮ್ಮ ವಜ್ರಪ್ಪ ಸಭೆಗೆ ತಿಳಿಸಿ ಕೂಡಲೆ ವೈದ್ಯರನ್ನು ನೇಮಕಮಾಡುವಂತೆ ಆಗ್ರಹಿಸಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವೇದಮೂರ್ತಿ ಇಲಾಖೆಯ ಸೌಲಭ್ಯವನ್ನು ವಿವರಿಸಿದರು.

ಆರೋಗ್ಯ ಇಲಾಖೆಯಲ್ಲಿ ಹಾವು ಕಡಿತಕ್ಕೆ ಒಳಗಾದವರಿಗೆ ಕೃತಕ ಉಸಿರಾಟ ಕವಾಟಗಳು ಲಭ್ಯವಿಲ್ಲದ ಕಾರಣ ಕಡಿತಕ್ಕೊಳಗಾದವರಿಗೆ ಹತ್ತಿರದ ಜಿಲ್ಲಾ ಕೇಂದ್ರಗಳಿಗೆ ಹೆಚ್ಚಿನ ಚಿಕಿತ್ಸೆಗೆ ಶಿಪಾರಸ್ಸು ಮಾಡಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಣೇಶ್ ತಿಳಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಾ ನಾಯ್ಕ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.