ADVERTISEMENT

ವಿಶ್ವಪರಂಪರೆ ಪಟ್ಟಿಗೆ ಪಶ್ಚಿಮಘಟ್ಟ:ವಿರೋಧ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 8:25 IST
Last Updated 4 ಜುಲೈ 2012, 8:25 IST

ಚಿಕ್ಕಮಗಳೂರು: ವಿಶ್ವಪರಂಪರೆ ಪಟ್ಟಿಗೆ ಪಶ್ಚಿಮಘಟ್ಟವನ್ನು ಸೇರಿಸಬಾರದು. ಪಶ್ಚಿಮಘಟ್ಟ ಸೇರ್ಪಡೆಗೆ ಕೈಗೊಂಡಿರುವ ತೀರ್ಮಾನಕ್ಕೆ ತಮ್ಮ  ಸಂಪೂರ್ಣ ವಿರೋಧ ಇದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.

ನಗರಕ್ಕೆ ಮಂಗಳವಾರ  ಅವರು ಸುದ್ದಿ ಗಾರರೊಂದಿಗೆ ಮಾತನಾಡಿ, ಕುದುರೆಮುಖ ಸೇರಿ ದಂತೆ ಮೂಡಿಗೆರೆ ತಾಲ್ಲೂಕಿನ ಅರ್ಧಭಾಗ ಪಶ್ಚಿಮಘಟ್ಟದ ವ್ಯಾಪ್ತಿಗೆ ಒಳಪಡಲಿದೆ. ಗಿರಿಜನರು ಮತ್ತು ಜನವಸತಿ ಪ್ರದೇಶಗಳು  ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡಲಿವೆ. ಇದರಿಂದ  ಕ್ಷೇತ್ರದ ಜನರು ತೊಂದರೆ ಅನುಭವಿಸುವ ಸಾಧ್ಯತೆಗಳಿವೆ ಎಂದು ಹೇಳಿದರು.

 ಕಳಸ ಇನಾಂ ಭೂಮಿಯನ್ನು ಡಿಸೆಂಬರ್ ಅಂತ್ಯಕ್ಕೆ  ತೆರವುಗೊಳಿಸಲು ಹೈಕೋರ್ಟ್ ಆದೇಶ ನೀಡಿರುವ  ಬಗ್ಗೆ ಕೇಳಿದಾಗ, ಈ ಭೂಮಿಯಲ್ಲಿ ವಾಸವಾಗಿರುವ ಜನರ ಪರವಾಗಿ  ಮರುಪರಿಶೀಲನೆ ನಡೆಸುವಂತೆ ನ್ಯಾಯಾಲಯಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಅರ್ಜಿಯ ವಿಚಾರಣೆಯನ್ನು ಕಳೆದ ತಿಂಗಳ 27ಕ್ಕೆ ನ್ಯಾಯಾಲಯ ಕೈಗೆತ್ತಿಕೊಳ್ಳಬೇಕಿತ್ತು ಆದರೆ ವಿಚಾ ರಣೆಯನ್ನು ಮುಂದೂಡಿದೆ. ಸರ್ಕಾರ ಸಲ್ಲಿಸಿ ರುವ ಮೇಲ್ಮನವಿ ಅರ್ಜಿಯ ಖರ್ಚುವೆಚ್ಚಕ್ಕಾಗಿ  ತಮ್ಮ 1 ತಿಂಗಳ  ವೇತನವನ್ನು ನೀಡಿರುವೆ  ಎಂದು ತಿಳಿಸಿದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತಾಲ್ಲೂಕು ಮತ್ತು ಜಿಲ್ಲಾಪಂಚಾಯಿತಿ ಅನುದಾನ ವನ್ನು ಹೊರತು ಪಡಿಸಿ ಸುಮಾರು 200  ಕೋಟಿ ರೂಪಾಯಿ ಅನುದಾನವನ್ನು ಸರ್ಕಾರದಿಂದ ತಂದಿರುವೆ.ಕ್ಷೇತ್ರದ ಜನರಿಗೆ ಸರ್ಕಾರದ ಒಂದಿಲ್ಲ ಒಂದು ಸವಲತ್ತುಗಳನ್ನು ನೀಡಿರುವೆ ಎಂದರು.

ಕ್ಷೇತ್ರ ಸುತ್ತೋದು ಲೇಸು: ಸಚಿವ ಸಂಪುಟ ವಿಸ್ತರಣೆ ಆಗಬೇಕು. ಸಚಿವ ಸ್ಥಾನ ದೊರಕದವರಿಗೆ ಹಾಗೂ ಸಚಿವ ಸ್ಥಾನದಿಂದ ವಂಚಿತವಾದ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ.  ಸಚಿವನಾಗಿ ರಾಜ್ಯ ಸುತ್ತೋದಕ್ಕಿಂತ ಶಾಸಕನಾಗಿ ಕ್ಷೇತ್ರ ಸುತ್ತೋದು ಒಳ್ಳೆಯದು. ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡುವ ಬದಲು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ ಅದೆ ಸಾಕು ಎಂದು  ಹೇಳಿದರು.

ಖರ್ಚು ಭರಿಸುವೆ: ಕೆಸರಿಕೆ ಗ್ರಾಮದ ಬಡ ವಿದ್ಯಾರ್ಥಿನಿ ಶಿಲ್ಪಾ ಮೈಲಿಮನೆ ಸರ್ಕಾರಿ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.91 ಅಂಕ ಪಡೆದುಕೊಂಡಿದ್ದಾಳೆ. ಉನ್ನತ ವ್ಯಾಸಂಗ ಮಾಡಬೇಕೆಂಬ ಹಂಬಲ ಇದೆ. ಅವರ ಮನೆಗೆ ಭೇಟಿ ನೀಡಿ ಪ್ರಥಮ ವರ್ಷದ ಬಿ.ಎ. ಪದವಿ ಪೂರ್ಣಗೊಳಿಸಲು ಬೇಕಾಗುವ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿರುವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.