ADVERTISEMENT

ವೈಜ್ಞಾನಿಕ ಕೃಷಿ- ಇಳುವರಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 6:08 IST
Last Updated 28 ಅಕ್ಟೋಬರ್ 2017, 6:08 IST

ಮೂಡಿಗೆರೆ: ಭತ್ತದ ಬೆಳೆಯಲ್ಲಿ ವೈಜ್ಞಾನಿಕತೆಯನ್ನು ಅನುಸರಿಸುವ ಮೂಲಕ ಹೆಚ್ಚು ಇಳುವರಿ ಪಡೆಯಬಹುದು ಎಂದು ಕೀಟ ಹಾಗೂ ರೋಗ ಶಾಸ್ತ್ರಜ್ಞ ಡಾ.ಗಿರೀಶ್‌ ಅಭಿಪ್ರಾಯಪಟ್ಟರು. ತಾಲ್ಲೂಕಿನ ಗೋಣಿಬೀಡು ಹೋಬಳಿಯ ಜಿ. ಹೊಸಳ್ಳಿಯಲ್ಲಿ ಗುರುವಾರ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಭತ್ತದ ಬೆಳೆಯಲ್ಲಿ ಇಳುವರಿ ಹೆಚ್ಚಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭತ್ತದ ಬೆಳೆಯು ನಷ್ಟದ ಬೆಳೆ ಎಂಬ ಕಲ್ಪನೆಯಿದೆ. ಆದರೆ, ವೈಜ್ಞಾನಿಕವಾಗಿ ಕೃಷಿ ನಡೆಸಿದರೆ ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆ ತೆಗೆದು ಲಾಭ ಪಡೆದುಕೊಳ್ಳಬಹುದು ಎಂದರು. ಭತ್ತದ ಬೆಳೆಯ ಸಂರಕ್ಷಣೆಯೂ ಮುಖ್ಯವಾಗಿದ್ದು. ಸಸಿಮಡಿಯಿಂದ ಕಟಾವಿನವರೆಗೂ ಭತ್ತದ ಆರೋಗ್ಯದ ಕಡೆ ರೈತರು ಗಮನ ಹರಿಸಬೇಕು. ಸುರುಳಿ ಹುಳು ರೋಗ, ಬೆಂಕಿರೋಗ ಮುಂತಾದ ಸಮಸ್ಯೆಗಳು ಭತ್ತವನ್ನು ಪೀಡಿಸುವುದರಿಂದ ರೋಗ ಹರಡುವ ಪೂರ್ವದಲ್ಲಿಯೇ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಭೈರವೇಶ್ವರ ರೈತ ಒಕ್ಕೂಟದ ಅಧ್ಯಕ್ಷ ಎಚ್.ಕೆ. ಪೂರ್ಣೇಶ್‌ ಮಾತನಾಡಿ, ‘ರೈತರು ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆಯನ್ನು ನಡೆಸಿ, ಮಣ್ಣಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡಬೇಕು. ಗುಣಮಟ್ಟದ ಮಣ್ಣಿನಿಂದ ಗುಣಮಟ್ಟದ ಬೆಳೆ ತೆಗೆಯಲು ಸಾಧ್ಯವಾಗುತ್ತದೆ ಎಂಬುದನ್ನು ರೈತರು ಅರಿಯಬೇಕು. ಗುಣಮಟ್ಟದ ಬೆಳೆಗೆ ಸರ್ವಕಾಲದಲ್ಲೂ ಬೇಡಿಕೆಯಿರುತ್ತದೆ’ ಎಂದರು.

ADVERTISEMENT

ಕೀಟಪತ್ತೆ, ರೋಗ ನಿವಾರಣೆ ಮುಂತಾದ ಪ್ರಾತ್ಯಕ್ಷಿಕೆ ನೀಡಲಾಯಿತು. ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಪವಿತ್ರ, ಅನುವುಗಾರರಾದ ಮಧು, ಭರತ್‌, ರೈತರಾರ ಕುಮಾರ್‌, ಯೋಗೇಶ್‌ ಹಾಗೂ ಜಿ. ಹೊಸಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.