ADVERTISEMENT

ವೈದ್ಯರ ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 10:13 IST
Last Updated 13 ಸೆಪ್ಟೆಂಬರ್ 2013, 10:13 IST

ಮೂಡಿಗೆರೆ:   ಪಟ್ಟಣದ ಮಹಾತ್ಮ­ಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲ್ಲೂಕಿನ ಎಲ್ಲಾ ಪ್ರಾಥ­ಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ತಕ್ಷಣವೇ ವೈದ್ಯ­ರನ್ನು ನೇಮಿಸುವಂತೆ ಒತ್ತಾಯಿಸಿ ಬುಧ­ವಾರ ಪಟ್ಟಣದಲ್ಲಿ ಆಟೊ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ­ದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ವತಃಶ್ಚಲಿ ಆಟೊ ಮಾಲೀಕರ ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷ ಅಮರನಾಥ್ ಮಾತನಾಡಿ, ಬಡವರ ಪರವೆಂದು ಘೋಷಣೆ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸಾರ್ವಜನಿಕ ಆಸ್ಪತ್ರೆ­ಗಳನ್ನು ಕಡೆಗಣಿಸಿದ್ದು, ಬಡವರ ವಿರೋಧಿ ನಿಲುವನ್ನು ತಾಳಿದೆ ಎಂದು ಆರೋಪಿಸಿದರು.

ಹದಿನಾರು ಜನ ಕಾರ್ಯನಿರ್ವಹಿಸಬೇಕಾದ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಕೇವಲ ನಾಲ್ಕು ಜನ ವೈದ್ಯರನ್ನು ಮಾತ್ರ ನೇಮಕಗೊಳಿಸಿ, ತುರ್ತು ಚಿಕಿತ್ಸೆ, ಪ್ರಸೂತಿ ತಜ್ಞರು, ಮಕ್ಕಳ ವೈದ್ಯರು, ಶಸ್ತ್ರ ಚಿಕಿತ್ಸಕರನ್ನು ನೇಮಕಗೊಳಿಸದೇ ತಾಲ್ಲೂಕಿನ ಜನತೆ ಪರೆದಾಡು ವಂತಾಗಿದೆ.

ಪ್ರಸೂತಿ ತಜ್ಞರಿಲ್ಲದೇ ನೆರೆಯ ಜಿಲ್ಲೆಗಳಿಗೆ ತೆರಳಿ ಹೆರಿಗೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಲಿ ಕಾರ್ಮಿ­ಕರು ಸಾಲಮಾಡಿ ಆಸ್ಪತ್ರೆಗೆ ತೆರಳ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಶೀಘ್ರ­ವಾಗಿ ವೈದ್ಯರನ್ನು ನೇಮಿಸದಿದ್ದಲ್ಲಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸ­ಲಾಗುವುದು ಎಂದರು.

ಆರೋಗ್ಯ ಸಮಸ್ಯೆಯ ಕುರಿತು ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಬಿ.ನಿಂಗಯ್ಯ ಅಸಹಾಯಕತೆ ವ್ಯಕ್ತ ಪಡಿಸಿರುವುದು ವಿರೋಧ ಪಕ್ಷದ ವೈಫಲ್ಯವನ್ನು ಎತ್ತಿ ಹಿಡಿದಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಪ್ರಸನ್ನದಾರದಹಳ್ಳಿ ಮಾತನಾಡಿ, 1 ಲಕ್ಷಕ್ಕೂ ಅಧಿಕ ಜನ­ಸಂಖ್ಯೆ ಹೊಂದಿರುವ ತಾಲ್ಲೂಕಿ­ನಲ್ಲಿ ಕೇವಲ ಹದಿನಾರು ಜನ ಸರ್ಕಾರಿ ವೈದ್ಯರಿ­ರುವುದು ಆರೋಗ್ಯಕ್ಷೇತ್ರದ ಮೇಲೆ ಸರ್ಕಾರಕ್ಕಿರುವ ಕಾಳಜಿಯನ್ನು ತೋರಿಸುತ್ತದೆ. ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ­ದರೂ, ಸಮಸ್ಯೆ ಬಗೆ ಹರಿಸದ ಸರ್ಕಾರ ಉಗ್ರ ಹೋರಾಟವನ್ನು ನೀರಿಕ್ಷಿಸಿ­ದಂತಿದ್ದು, ಮುಂದಿನ ದಿನ­ಗಳಲ್ಲಿ ತಾಲ್ಲೂಕಿನ ಎಲ್ಲಾ ಜನರನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಜೈಭೀಮ್ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಯು.ಬಿ.ಮಂಜಯ್ಯ, ರಜಾಕ್ ಮಾತ­ನಾಡಿದರು. ಸುರೇಶ್, ಗಣೇಶ್, ಅಜಿತ್, ಮುಸ್ತಫಾ, ಬಿಳಗುಳ ಸುಂದರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.