ADVERTISEMENT

ವೈದ್ಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:25 IST
Last Updated 25 ಏಪ್ರಿಲ್ 2013, 6:25 IST

ನರಸಿಂಹರಾಜಪುರ: ಕರ್ತವ್ಯನಿರತ ಸರ್ಕಾರಿ ವೈದ್ಯ ಡಾ.ಜಿ.ಬಾಲಕೃಷ್ಣ ಅವರ ಮೇಲೆ ಮಂಗಳವಾರ ಕಿಡಿಗೇಡಿಗಳು ನಡೆಸಿದ ಹಲ್ಲೆಯನ್ನು ಖಂಡಿಸಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಬುಧವಾರ ಸೇವೆ ಸ್ಥಗಿತಗೊಳಿಸಿ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಎಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಮುತ್ತಿನಕೊಪ್ಪ ವೈದ್ಯಾಧಿಕಾರಿ ಡಾ.ಮಧುಸೂದನ್, ಎನ್.ಆರ್.ಪುರದ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಸೇವೆ ಸಲ್ಲಿಸಲು ಭಯದ ವಾತಾವರಣ ನಿರ್ಮಾಣವಾಗಿದೆ.

ಸರ್ಕಾರ ರಕ್ಷಣೆ ನೀಡುವ ಭರವಸೆ ನೀಡಿದರೆ ಮಾತ್ರ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಇದೇ ರೀತಿ ಪ್ರಕರಣ ಪುನರಾವರ್ತಿಸಿದರೆ ಇಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ಸಾಮೂಹಿಕವಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತೇವೆ. ಇದರಿಂದ ಸಾರ್ವಜನಿಕರಿಗೆ ನಷ್ಟವಾಗುತ್ತದೆ. ಹಾಗಾಗಿ ಮೇಲಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಕರ್ತವ್ಯ ನಿರತ ವೈದ್ಯರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ವೈದ್ಯಾಧಿಕಾರಿಗಳ ಸಂಘ ಇದನ್ನು ಖಂಡಿಸುತ್ತದೆ. ಮಲೆನಾಡಿನ ಭಾಗದ ಗ್ರಾಮೀಣ ಭಾಗದಲ್ಲಿ ದಾದಿಯರು, ಆಶಾ ಕಾರ್ಯಕರ್ತೆಯರು ಏಕಾಂಗಿಯಾಗಿ ಕೆಲಸನಿರ್ವಹಿಸುತ್ತಿರುತ್ತಾರೆ. ಇವರಿಗೆ ಸೂಕ್ತ ರಕ್ಷಣೆ ಬೇಕು. ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದ ಸ್ಥಿತಿ ಇತ್ತು. ಆದರೆ ಪ್ರಸ್ತುತ ಎಲ್ಲಾ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆಯಂತ ಪ್ರಕರಣಗಳು ನಡೆದರೆ ಆತ್ಮಸ್ಥೈರ್ಯ ಕುಂದಿಸಿದಂತಾಗುತ್ತದೆ. ಹಲ್ಲೆ ನಡೆಸಿದವರ ಮೇಲೆ ಉಗ್ರ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಲ್ಲದೆ ಆಸ್ಪತ್ರೆಯಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಪೊಲೀಸ್‌ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಲಾಗುವುದು. ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸಾರ್ವಜನಿಕರ ಸೇವೆ ಸ್ಥಗಿತಗೊಳಿಸದೆ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್‌ಸ್ವಾಮಿ ಮಾತನಾಡಿ, ಸರ್ಕಾರದ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸರ್ಕಾರಿ ನೌಕರರಿಗೆ ಸರ್ಕಾರ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಗೌಸ್ ಮಹಿಯುದ್ದೀನ್ ಮಾತನಾಡಿ, ಸರ್ಕಾರಿ ನೌಕರರ ಮೇಲೆ ಇದೇ ರೀತಿ ಹಲ್ಲೆ ನಡೆದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.ಈ ಸಂದರ್ಭದಲ್ಲಿ ವೈದ್ಯರಾದ ಡಾ.ಜಗದೀಶ್, ಡಾ.ಬಾಲಕೃಷ್ಣ, ಡಾ.ಸುದರ್ಶನ್, ಡಾ.ವಿವೇಕಾನಂದ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪಿ.ಪ್ರಭಾಕರ್, ಸಹ ಕಾರ್ಯದರ್ಶಿ ಎಂ.ಪಿ.ವರ್ಗೀಸ್, ತಾಲ್ಲೂಕು ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ಡಾ.ಸುರೇಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.