ADVERTISEMENT

`ಶಾಲಾ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ'

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 5:28 IST
Last Updated 2 ಜುಲೈ 2013, 5:28 IST

ಕಡೂರು: ಸ್ಟೇಟ್‌ಬ್ಯಾಂಕ್ ಬಳಗವು ದೇಶದ ಹಣಕಾಸು ವ್ಯವಹಾರಗಳಲ್ಲಿ ಮಾತ್ರ ತೊಡಗಿಕೊಳ್ಳದೆ ಸಾರ್ವಜನಿಕ ಕಳಕಳಿಯ ಮತ್ತು ಸಾಮಾಜಿಕ ಬದಲಾವಣೆಯ ಉನ್ನತ ಧ್ಯೇಯಗಳನ್ನೂ ಹೊಂದಿದೆ ಎಂದು ಕಡೂರು ಎಸ್‌ಬಿಎಂನ ವ್ಯವಸ್ಥಾಪಕ ಶ್ರೀನಿವಾಸ್ ತಿಳಿಸಿದರು.

ಸ್ಟೇಟ್‌ಬ್ಯಾಂಕ್ ಸಂಸ್ಥಾಪನಾ ದಿನದ ಅಂಗವಾಗಿ ಪಟ್ಟಣದ ಧೃವತಾರೆ ಪ್ರೌಢಶಾಲೆಗೆ ಶಾಲಾಕಚೇರಿಯಲ್ಲಿ ಬ್ಯಾಂಕ್ ವತಿಯಿಂದ 10 ಸೀಲಿಂಗ್ ಫ್ಯಾನ್‌ಗಳನ್ನು ನೀಡಿ ಸೋಮವಾರ ಅವರು ಮಾತನಾಡಿದರು.

ಸ್ಟೇಟ್‌ಬ್ಯಾಂಕ್ ಬಳಗವು ತನ್ನ ಧ್ಯೇಯಗಳಲ್ಲಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಬಗ್ಗೆ ಆದ್ಯತೆ ಹೊಂದಿದ್ದು, ಪ್ರತಿವರ್ಷವೂ ಶಾಲೆಗಳಿಗೆ ಅಗತ್ಯವಿರುವ ಸೌಕರ್ಯ ಗಳನ್ನು ಒದಗಿಸಲಾಗುತ್ತಿದ್ದು ದೇಶಾದ್ಯಂತ ಇಂದು ಪ್ರತಿ ಶಾಖೆಗೆ ಒಂದು ಶಾಲೆಯಂತೆ 14800 ಶಾಲೆಗಳಿಗೆ ಈ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯ ಟಿ.ಆರ್.ಲಕ್ಕಪ್ಪ ಮಾತನಾಡಿ, ಅನುದಾನಿತ ಪ್ರೌಢಶಾಲೆಯಾದರೂ ಫಲಿತಾಂಶದ ದೃಷ್ಟಿಯಿಂದ ಉತ್ತಮ ಸಾಧನೆ ಮಾಡುತ್ತಿರುವ ಕನ್ನಡ ಶಾಲೆಯನ್ನು ಗುರುತಿಸಿ ಈ ಹಿಂದೆ ಇನ್‌ಫೋಸಿಸ್ ಸಂಸ್ಥೆ ಮತ್ತು ರಾಜ್ಯ ಸರ್ಕಾರಗಳು ಲಕ್ಷಾಂತರ ರೂ ಮೊತ್ತದ ಸೌಲಭ್ಯಗಳನ್ನು ಒದಗಿಸಿವೆ. ಇಂದು ಬ್ಯಾಂಕ್ ಸಹ ಸೌಲಭ್ಯ ಒದಗಿಸಲು ಮುಂದಾಗಿದ್ದು ಈ ಗುರುತಿಸುವಿಕೆಯಿಂದ ಶಾಲೆಯನ್ನು ಅಭಿವೃದ್ಧಿಪಡಿಸುವ ಹುಮ್ಮಸ್ಸು ಹೆಚ್ಚುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಲೆಕ್ಕಾಧಿಕಾರಿ ರಾಜೀವ್‌ಕುಮಾರ್, ಲೋಕೇಶ್, ಶಾಲೆಯ ಶಿಕ್ಷಕರಾದ ಮೋಹನ್‌ಕುಮಾರ್, ಹಾಲ ಸಿದ್ದಪ್ಪ, ರಾಜಣ್ಣ, ಲೀಲಾವತಿ, ವೃಷಭೇಂದ್ರಯ್ಯ, ಕೆಂಚಪ್ಪ ಮತ್ತಿತರರು ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.