ADVERTISEMENT

ಶೃಂಗೇರಿ ಕ್ಷೇತ್ರ ಅಭಿವೃದ್ಧಿಗೆ ಅನುದಾನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 5:35 IST
Last Updated 18 ಜೂನ್ 2012, 5:35 IST

ನರಸಿಂಹರಾಜಪುರ: ಪ್ರಸಕ್ತ ಸಾಲಿನ ವಿಧಾನ ಪರಿಷತ್ ಸದಸ್ಯರ ಅನುದಾನ ವನ್ನು ಸಂಪೂರ್ಣವಾಗಿ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಎಂ.ಶ್ರೀನಿವಾಸ್ ತಿಳಿಸಿದರು.
ವಿಧಾನಪರಿಷತ್ ಸದಸ್ಯರ ಕಚೇರಿಯಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈವರೆಗೆ ತಮ್ಮ ಅನುದಾನದ 1 ಕೋಟಿ ರೂ. ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನ ಸೇರಿಕೊಂಡು 81 ಲಕ್ಷ ರೂ. ಗಳನ್ನು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ. ಜೆಡಿಎಸ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬಲಗೊಳಿಸಲು ಹೆಚ್ಚಿನ ಅನುದಾನ ಇಲ್ಲಿಗೆ ನೀಡಲು ನಿರ್ಧರಿಸಲಾಗಿದ್ದು, ಪಕ್ಷದ ಮುಖಂಡರು ಇದರ ಸದುಪಯೋಗ ವಾಗುವಂತೆ ನೋಡಿಕೊಳ್ಳಬೇಕು ಎಂದರು.

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದರೆ ಗೆಲುವು ಸಾಧಿಸಲು ಅವಕಾಶವಿತ್ತು. ರಾಜ್ಯದ ಜನ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ್ದು ಮುಂದಿನ ಚುನಾವಣೆಯಲ್ಲಿ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಪರೇಷನ್ ಕಮಲಕ್ಕೆ ತುತ್ತಾಗಿ ಪಕ್ಷ ಬಿಟ್ಟವರು ತಾವು ಮಾಡಿದ ತಪ್ಪು ಅರಿವಾಗಿದ್ದು ಪುನಃ ಮಾತೃಪಕ್ಷಕ್ಕೆ ಮರಳಿ ತರುವ ಪ್ರಯತ್ನದಲ್ಲಿದ್ದಾರೆ. ಪಕ್ಷದ ಕಾರ್ಯಕರ್ತರು ಪರಿಶ್ರಮದ ಮೂಲಕ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರಲು ಪ್ರಯತ್ನಿಸ ಬೇಕೆಂದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿ, ವಿಧಾನಪರಿಷತ್ ಸದಸ್ಯರು ಸರ್ಕಾರದ ಅನುದಾನದ ಜತೆಗೆ ವೈಯಕ್ತಿಕವಾಗಿಯೂ ಹೆಚ್ಚಿನ ನೆರವನ್ನು ಈ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದಾರೆ. ಮುಖ್ಯವಾಗಿ ಕಡಹಿನ ಬೈಲು ಏತನೀರಾವರಿ ಯೋಜನೆಗೆ ಅನುದಾನದ ಬಿಡುಗಡೆ, ಪಟ್ಟಣದ ಪೇಟೆ ಆಂಜನೇಯ ದೇವಸ್ಥಾನಕ್ಕೆ 40 ಲಕ್ಷ ರೂ., ವೆಂಕಟಾಪುರ ದೇವಸ್ಥಾನಕ್ಕೆ 3 ಲಕ್ಷ ರೂ., ಕೊಪ್ಪದ ರಾಘವೇಂದ್ರ ಮುಂಡಾಳ ಸಮುದಾಯ ಭವನಕ್ಕೆ 2 ಲಕ್ಷ ರೂ. ನಿಲುವಾಗಿಲು ಗ್ರಾ.ಪಂ. ಬೆಣಚಲು ಕೊಪ್ಪ ಕಾಲೊನಿ ಹಳ್ಳಕ್ಕೆ ತಡೆಗೋಡೆ ನಿರ್ಮಾಣಕ್ಕೆ 2 ಲಕ್ಷ ರೂ., ಎನ್.ಆರ್. ಪುರ ಮುಂಡೊಳ್ಳಿ ಪರಿಶಿಷ್ಟಜಾತಿ ರಸ್ತೆ ಅಭಿವೃದ್ಧಿಗೆ 1 ಲಕ್ಷ ರೂ., ಶಾದಿಮಹಲ್ ನಿರ್ಮಾಣಕ್ಕೆ 9 ಲಕ್ಷ ರೂ. ಅನುದಾನ ನೀಡಿದ್ದಾರೆಂದು ಮಾಹಿತಿ ನೀಡಿದರು.

ಜೆಡಿಎಸ್ ಮುಖಂಡರಾದ ಎಸ್.ಎಸ್. ಶಾಂತಕುಮಾರ್, ಹೊಸೂರು ಸುರೇಶ್, ದೀಪಾ ಉಮಾಶಂಕರ್, ಸೈಯದ್ ಸಿಗ್ಬತುಲ್ಲಾ, ಅಬ್ದುಲ್ ಸುಬಾನ್‌ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.