ADVERTISEMENT

ಶ್ರೀಕಂಠೇಶ್ವರ ದೇಗುಲ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 5:45 IST
Last Updated 16 ಫೆಬ್ರುವರಿ 2012, 5:45 IST

ಚಿಕ್ಕಮಗಳೂರು: ನಗರದ ಕಾಮಧೇನು ಗಣಪತಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಧನ್ವಂತರಿ ಮೃತ್ಯುಂಜಯ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಬುಧವಾರ ಸಹಸ್ರಾರು ಭಕ್ತರ ನಡುವೆ ಲೋಕಾರ್ಪಣೆಯಾಯಿತು.

ಲೋಕಾರ್ಪಣೆಯ ಅಂಗವಾಗಿ ಪುಣ್ಯಾಹ, ದೇವನಾಂದಿ, ಕಳಸಾರಾಧನೆ, ಗಣಪತಿ ಹೋಮ, ಸುಬ್ರಮಣ್ಯ ಹೋಮ, ನವಗ್ರಹ ಹೋಮ, ಧನ್ವಂತರಿ ಮೃತ್ಯುಂಜಯ ಹೋಮ, ಪಂಚಗವ್ಯ ಪ್ರಾಯಶ್ಚಿತ್ತ ಹೋಮ, ಕಲಾ ಹೋಮ ಹಾಗೂ ರುದ್ರ ಹೋಮಗಳು ಜರುಗಿದವು.

ಸೂರ್ಯೋದಯದ ವೇಳೆ ಉತ್ತರ ಕನ್ನಡ ಜಿಲ್ಲೆ ಬಂಗಾರಮಕ್ಕಿ ಕ್ಷೇತ್ರದ ಮಾರುತಿ ಗುರೂಜಿ ಅವರು ಆರು ಅಡಿ ಎತ್ತರದ ಧನ್ವಂತರಿ ಮೃತ್ಯುಂಜಯ ಶ್ರೀಕಂಠೇಶ್ವರ ಸ್ವಾಮಿಯ ವಿಗ್ರಹದ ಪ್ರತಿಷ್ಠಾಪನೆ ನೆರವೇರಿಸಿ, ಕಳಸಾಭಿಷೇಕ ಮಾಡಿದರು. ಜತೆಗೆ ನಾಮಫಲಕ ಅನಾವರಣಗೊಳಿಸಿ, ನೂತನ ದೇವಾಲಯ ಲೋಕಾರ್ಪಣೆ ಮಾಡಿದರು.

ನಂತರ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಗುರೂಜಿ, ಆಧುನಿಕತೆಯ ನಾಗಾಲೋಟದಲ್ಲಿರುವ ಮನುಷ್ಯನಿಗೆ ಮಾನಸಿಕ ಶಾಂತಿ ನೆಮ್ಮದಿ ಮತ್ತು ಸಂಸ್ಕಾರಕ್ಕೆ ದೇವಾಲಯಗಳು ಅತ್ಯಗತ್ಯ. ದೇವರನ್ನು ನಂಬಿ ನಡೆಯುವವರನ್ನು ಭಗವಂತ ಎಂದಿಗೂ ಕೈ ಬಿಡುವುದಿಲ್ಲ. ಅಚಲ ನಂಬಿಕೆ, ಶ್ರದ್ಧೆ ಮತ್ತು ಭಕ್ತಿ ಇದ್ದರೆ ಆತನನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.

ಶಾಸಕ ಸಿ.ಟಿ. ರವಿ ಮಾತನಾಡಿ, ಆಧ್ಯಾತ್ಮಿಕ ಹಾದಿಯಲ್ಲಿ ಸಾಗಲು, ಭಗವಂತನನ್ನು ಕಾಣಲು ದೇವಾಲಯ ಸಹಕಾರಿ, ದೇವಾಲಯ ನಿರ್ಮಿಸುವುದು ಭಗವಂತನಿಗಲ್ಲ. ಅದನ್ನು ನಿರ್ಮಿಸುವುದು ಭಕ್ತರಿಗಾಗಿ ಎಂದು ಹೇಳಿದರು.

ನೂತನ ದೇವಾಲಯವನ್ನು ನಿರ್ಮಿಸಿಕೊಟ್ಟ ಎಂ.ವೆಂಕಟರಾಮಯ್ಯ ದಂಪತಿ ಹಾಗೂ ನಿರ್ಮಾಣಕ್ಕೆ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಾಹಿತಿ ರಾಮಸುಬ್ರಾಯ ಸೇಟ್ ಅವರು ಬರೆದಿರುವ ಗಮಕ ನೂರೆಂಟು ಪುಸ್ತಕ ಬಿಡುಗಡೆ ಮಾಡಲಾಯಿತು.

ಕಾಫಿ ಬೆಳೆಗಾರ ಎಚ್.ಬಿ.ರಾಜಗೋಪಾಲ್, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಂಕುಮಾರ್, ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಎಂ.ವೆಂಕಟಸುಬ್ಬರಾವ್, ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್.ನಂಜುಂಡಸ್ವಾಮಿ, ಹಿರಿಯ ಪಶು ಪರೀಕ್ಷಕ ಟಿ.ಎನ್.ಲಕ್ಷ್ಮಣ ರಾಜು, ಎಂ.ಎನ್.ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.