ಚಿಕ್ಕಮಗಳೂರು: ನಗರದ ಸತ್ಯಸಾಯಿ ಮಧುವನ ಬಡಾವಣೆಯಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ನಿವಾಸಿಗಳು ಶಾಸಕ, ನಗರಸಭೆ ಅಧ್ಯಕ್ಷರಿಗೆ ಮತ್ತು ಸಣ್ಣ ನೀರಾವರಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಡಾವಣೆಯ ಮೇಲಿರುವ ಕಾಲುವೆ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಈ ಕಾಲುವೆಯಲ್ಲಿ ಗಿಡಗಳು ಬೆಳೆದು ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿದೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಸೊಳ್ಳೆ, ಕ್ರಿಮಿಕೀಟ ಹಾಗೂ ಹಾವುಗಳ ವಾಸಸ್ಥಳವಾಗಿ ಮಾರ್ಪಾಟ್ಟಿದೆ ಎಂದು ಅವರು ದೂರಿದರು.ಕಾಲುವೆಯನ್ನು ಸ್ವಚ್ಛಗೊಳಿಸಿ ಕೂಡಲೇ ಕಾಂಕ್ರಿಟ್ ರಸ್ತೆ ಮಾಡಬೇಕು ಎಂದು ಅವರು ಆಯುಕ್ತರನ್ನು ಆಗ್ರಹಿಸಿದರು.
ಬಡಾವಣೆಗೆ ತೆರಳುವಾಗ ಒಳ ಚರಂಡಿ ಮ್ಯಾನ್‌ಹೋಲ್‌ಗಳು ತುಂಬಿ ತ್ಯಾಜ್ಯ ಉಕ್ಕಿ ಹರಿಯುತ್ತವೆ. ಇದನ್ನು ದುರಸ್ತಿಪಡಿಸುವಂತೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಬಡಾವಣೆಯಲ್ಲಿರುವ ಮೂರು ರಸ್ತೆಗಳು ಅನೇಕ ವರ್ಷಗಳಿಂದ ಡಾಂಬರು ಕಂಡಿಲ್ಲ. ಡಾಂಬರೀಕರಣಕ್ಕೆ 15 ಲಕ್ಷ ರೂ ನಿಗದಿಪಡಿಸಿದ್ದರೂ ಕೆಲಸ ಮಾತ್ರ ಪ್ರಾರಂಭವಾಗುತ್ತಿಲ್ಲ. ಇದೇ ಬೇಸಿಗೆಯಲ್ಲಿ ಕಾಮಗಾರಿ ಪೂರೈಸಿದರೆ ಒಳಿತು ಎಂದು ಅವರು ಅಭಿಪ್ರಾಯಪಟ್ಟರು.
ಬಡಾವಣೆಯಲ್ಲಿ ಎರಡು ಉದ್ಯಾನಕ್ಕೆ ಸ್ಥಳ ಮೀಸಲಿಡಲಾಗಿದೆ. ಒಂದರಲ್ಲಿ ನೀರಿನ ಕಾರಂಜಿ ಅಳವಡಿಸಲಾಗಿದೆ. ಆದರೆ ಪಕ್ಕದಲ್ಲಿ ಹರಿಯುವ ಯಗಚಿ ಕಾಲುವೆ ಭಾಗಕ್ಕೆ ನಗರಸಭೆ ಸ್ವಲ್ಪ ಭಾಗಕ್ಕೆ ಗೋಡೆ ಹಾಕಿ ಭದ್ರಪಡಿಸಿದೆ. ಉಳಿದ ಕಡೆ ಗೋಡೆ ನಿರ್ಮಿಸಿಲ್ಲ. ಇದನ್ನು ಪೂರ್ಣಗೊಳಿಸಬೇಕು. ಉದ್ಯಾನಕ್ಕೆ ಬೇಲಿ ನಿರ್ಮಿಸಬೇಕೆಂದು ಅವರು ಕೋರಿದರು.
ಮನೆಗಳು ಸಂಖ್ಯೆ ಹೆಚ್ಚುತ್ತಿರುವುದರಿಂದ ನೀರಿನ ಸಂಗ್ರಹಣಾ ಟ್ಯಾಂಕ್ ಸಾಕಾಗುತ್ತಿಲ್ಲ. ಈ ಟ್ಯಾಂಕ್‌ಗೆ ಸದ್ಯಕ್ಕೆ ಕೊಳವೆ ಬಾವಿ ಮೂಲಕ ನೀರು ತುಂಬಿಸಲಾಗುತ್ತಿದೆ. ಯಗಚಿ ಪೈಪ್‌ಲೈನ್ ಮೂಲಕ ನೀರನ್ನು ಟ್ಯಾಂಕ್‌ಗೆ ಹರಿಸಿ ಸಮಸ್ಯೆ ನಿವಾರಿಸಲು ಮುಂದಾಗಬೇಕೆಂದು ಅವರು ಮನವಿ ಮಾಡಿದರು.
ಕಳಪೆ ಕಾಮಗಾರಿ: ದೂರು
ಚಿಕ್ಕಮಗಳೂರು: ಉಪ್ಪಳ್ಳಿ, ಹಿರೇಕೊಳಲೆ ರಸ್ತೆ ಎಡಭಾಗದ ಹೊಸ ಬಡಾವಣೆಯಲ್ಲಿ ನಗರಸಭೆಯಿಂದ ಕೈಗೊಂಡಿರುವ ಬಾಕ್ಸ್ ಚರಂಡಿ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ನಗರಸಭೆ ಸದಸ್ಯೆ ಜುಬೇದ ಬದ್ರು ನಗರಸಭೆ ಆಯುಕ್ತರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಿರುವ ಕಡೆ ಕಾಮಗಾರಿ ಮಾಡದೆ ಎಲ್ಲೆಂದರಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗದೆ. ಈ ಕುರಿತು ನಗರಸಭೆ ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲವೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಕಾಮಗಾರಿಗೆ ಈಗಾಗಲೇ ಬಿಲ್ಲು ಪಾವತಿಸಲಾಗಿದೆ. ಈಗ ಹಿರೇಕೊಳಲೆ ರಸ್ತೆ ಎಡಭಾಗದ ದೇವಣ್ಣಪ್ಪ ಲೇಔಟ್‌ನ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಬಾಕ್ಸ್ ಚರಂಡಿ ಕೆಲಸ ನಡೆಯುತ್ತಿದೆ. ಈ ರಸ್ತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದೆ. 40 ಅಡಿ ರಸ್ತೆಗೆ ಅಗಲ ಕಡಿಮೆ ಮಾಡಿ ನಿವೇಶನದಾರರು ರಸ್ತೆ ಒತ್ತುವರಿ ಮಾಡಲು ಸಹಾಯ ಮಾಡಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಕೂಡಲೇ ಈ ಕಾಮಗಾರಿಯನ್ನು ಪರಿಶೀಲಿಸಿ 40 ಅಡಿ ರಸ್ತೆಗೆ ಸರಿಯಾಗಿ ಚರಂಡಿ ಮತ್ತು ಅಗತ್ಯವಿರುವ ಕಡೆ ಡೆಕ್‌ಸ್ಲಾಬ್ ಮಾಡಿಸಬೇಕು. ಇಲ್ಲವಾದರೆ ನಗರಸಭೆ ಎದುರು ಧರಣಿ ನಡೆಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.
ಉಪ್ಪಳ್ಳಿ ಬಡಾವಣೆಯಲ್ಲಿ ನಡೆಯುತ್ತಿರುವ ಬಾಕ್ಸ್ ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಈ ಭಾಗದ ಸದಸ್ಯೆ ಎರಡನೇ ಬಾರಿಗೆ ಆಯುಕ್ತರಿಗೆ ದೂರು ನೀಡಿದ್ದಾರೆ. ಕಾಮಗಾರಿ ಕುರಿತು ಎಂಜಿನಿಯರಿಗೆ ತೋರಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದೂರಿನಲ್ಲಿ ತಿಳಿಸಿದ್ದಾರೆ.
ಟೆಂಡರ್ ಆಗಿರುವ ಬಗ್ಗೆ ತಾಂತ್ರಿಕ ದೋಷಗಳಿವೆ. ಇದನ್ನು ತಡೆಹಿಡಿಯುವಂತೆ ಕೋರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲವೆಂದು ಹೇಳಿದ್ದಾರೆ. ಸೂಕ್ತ ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.