ADVERTISEMENT

ಸದಾನಂದಗೌಡ ದುರ್ಬಲ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 9:35 IST
Last Updated 12 ಮಾರ್ಚ್ 2012, 9:35 IST

ತರೀಕೆರೆ: ರಾಜ್ಯದ 127 ತಾಲ್ಲೂಕಿನಲ್ಲಿ ಬರದ ಛಾಯೆ ಮೂಡಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರಾಜ್ಯದ ದುರ್ಬಲ ಮುಖ್ಯಮಂತ್ರಿ ಸದಾನಂದಗೌಡ ಈ ಬಗ್ಗೆ ಚಿಂತಿಸುವಲ್ಲಿ ಉದಾಸೀನತೆ ತೋರಿದ್ದಾರೆ ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪುರ್ ಆರೋಪಿಸಿದರು.

ಇಲ್ಲಿನ ನಾಗಪ್ಪ ಚೌಡೇಶ್ವರಿ ಕಾಲೊನಿಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ಎಲ್.ಬೋಜೆಗೌಡ ಪರವಾಗಿ ಚುನಾವಣೆ ಪ್ರಚಾರ ನಡೆಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.ಪಕ್ಷ ಕ್ಷೇತ್ರದಲ್ಲಿ ಪ್ರಬಲವಾಗಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮಗಳು ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್, ವಿಧಾನಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಮತ್ತು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ನರೇಂದ್ರ, ಯುವ ಮುಖಂಡರಾದ ವರ್ಮಪ್ರಕಾಶ್, ರಫೀಕ್, ಶಿವಕುಮಾರ್‌ಗುಂಡಿ ಮತ್ತು ಗಿರೀಶ್ ಮುಂತಾದವರು ಇದ್ದರು.

`ಬಂಜಾರ ಅಭಿವೃದ್ಧಿಗೆ 115 ಕೋಟಿ~
ತರೀಕೆರೆ: ರಾಜ್ಯದ ಬಂಜಾರ ಸಮುದಾಯದವರು ವಾಸಿಸುವ ತಾಂಡ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 115 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಮುಂಬರುವ ಬಜೆಟ್‌ನಲ್ಲಿ ರೂ 217 ಕೋಟಿ ಹಣವನ್ನು ನೀಡುವ ಸಾಧ್ಯತೆ ಇದೆ ಎಂದು ರಾಜ್ಯ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್ ನಾಯ್ಕ ತಿಳಿಸಿದರು.

ಇಲ್ಲಿನ ನಾಗಪ್ಪ ಕಾಲೊನಿಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸುನೀಲ್‌ಕುಮಾರ್ ಪರ ಮತಯಾಚನೆ ನಡೆಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.ಇದುವರೆಗೂ ಬಂಜಾರ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದನ್ನು ಒಪ್ಪಿಕೊಂಡ ಅವರು ರಾಜ್ಯದ ಬಿಜೆಪಿ ಸರ್ಕಾರ ಸಮುದಾಯಕ್ಕೆ ಮಾಡಿದ ಕೆಲಸವನ್ನು ಕಾಂಗ್ರೆಸ್ ಪಕ್ಷ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

   ಶೇ.80ಕ್ಕೂ ಹೆಚ್ಚು ಬಂಜಾರ ಸಮುದಾಯದ ಜನತೆ ಕ್ಷೇತ್ರದಲ್ಲಿ ಬೆಜೆಪಿಯನ್ನು ಬೆಂಬಲಿಸುತ್ತಿದ್ದು ಮಿಕ್ಕವರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದರು.

ಜಿಲ್ಲಾ ಎಸ್‌ಸಿ ಎಸ್‌ಟಿ ಮೋಚಾರ್ಯದ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್‌ನಾಯ್ಕ, ತಾಲ್ಲೂಕು ಅಧ್ಯಕ್ಷ ಶಿವಚಂದ್ರ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಾನಾಯ್ಕ, ಮುಖಂಡರಾದ ಟಿ.ಎಂ.ಬೋಜರಾಜ್, ಬಿ.ಇ.ನಾಗರಾಜ್ ಮತ್ತು ಜಗದೀಶ್ ನಾಯ್ಕ ಮುಂತಾದವರು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.