ADVERTISEMENT

ಸಮರ್ಥ ಅಭ್ಯರ್ಥಿಗೆ ಪಕ್ಷಗಳ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 6:05 IST
Last Updated 21 ಜನವರಿ 2012, 6:05 IST

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವುದನ್ನು ರಾಜಕೀಯ ಪಕ್ಷಗಳು ಎದುರು ನೋಡುತ್ತಿವೆ. ಜತೆಗೆ ಸೂಕ್ತ ಮತ್ತು ಸಮರ್ಥ ಅಭ್ಯರ್ಥಿಯ ಶೋಧನೆಯಲ್ಲಿ ನಿರತ ವಾಗಿವೆ. ಪಕ್ಷಗಳ ಪಡಸಾಲೆಯಲ್ಲಿ ರಾಜಕೀಯ ಚಟುವಟಿಕೆಗಳು ಸ್ವಲ್ಪ ಬಿರುಸಾಗಿಯೇ ನಡೆಯುತ್ತಿವೆ. ಪಕ್ಷಗಳ ವರಿಷ್ಠರು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಟಿಕೆಟ್ ಗಿಟ್ಟಿಸಲು ಹುರಿಯಾಳುಗಳು ಕೂಡ ಲಾಬಿ ನಡೆಸುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚನಾವಣೆ ಫಲಿತಾಂಶ ಮುಂಬರುವ ಚುನಾವಣೆಗಳಿಗೂ ದಿಕ್ಸೂಚಿ ಮತ್ತು ಸ್ಫೂರ್ತಿಯಾಗಲಿದೆ ಎನ್ನುವ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿರುವುದರಿಂದ ಪ್ರಮುಖ ರಾಜಕೀಯ ಪಕ್ಷಗಳೆಲ್ಲವೂ ಈ ಉಪಚುನಾವಣೆಯತ್ತ ಕಣ್ಣಿಟ್ಟು, ಪಕ್ಷ ಸಂಘಟನೆ, ಸಮಾವೇಶ ಮಾಡುತ್ತಿವೆ.

ಅಂಬೇಡ್ಕರ್ ಪ್ರತಿಮೆ ಅನಾವರಣಾ ನೆಪದಲ್ಲಿ ಜಿಲ್ಲೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರೇ ಭೇಟಿ, ಜಿಲ್ಲೆಗೆ 60 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಪ್ಯಾಕೇಜ್ `ಉಪಚುನಾವಣೆ ಸ್ಟಂಟ್~ ಎಂದು ವಿರೋಧ ಪಕ್ಷದ ನಾಯಕಿ ಮೋಟಮ್ಮ ಕೂಡ ಆರೋಪಿಸಿದ್ದು ಇದೆ. ಕಾಂಗ್ರೆಸ್ ಕೂಡ ಚುನಾವಣೆ ಹತ್ತಿರವಿರುವಾಗ ಅಡಿಕೆ ಹಳದಿ ಎಲೆರೋಗ, ಹುಲಿ ಯೋಜನೆ ಸಮಸ್ಯೆಯನ್ನು ಬಲವಾಗಿ ಹಿಡಿದು ಕೊಳ್ಳುತ್ತಿದೆ.
 
ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಎಐಸಿಸಿ ಪ್ರಧಾನಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕೊಪ್ಪ, ಶೃಂಗೇರಿಯಲ್ಲಿ ಸಮಾವೇಶ ನಡೆಸಿ, ಅಡಿಕೆ ಬೆಳೆಗಾರರಿಗೆ ಸಾಂತ್ವನ ಹೇಳಿದ್ದಾರೆ.

ಅಡಿಕೆ ಬೆಳೆಗಾರರ ಬೇಡಿಕೆಗೆ ಪ್ರತಿಯಾಗಿ `ಪರಿಹಾರ ಕೊಡಿಸುತ್ತೇವೆ. ಚುನಾವಣೆಯಲ್ಲಿ ನಮಗೆ ಮತ ನೀಡಿ~ ಎನ್ನುವ ಬೇಡಿಕೆಯನ್ನು ಇಟ್ಟು ಹೋಗಿದ್ದಾರೆ. ಇದರಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶೃಂಗೇರಿಗೆ ಮೊನ್ನೆಯಷ್ಟೇ ಬಂದು, ಹಳದಿ ಎಲೆ ರೋಗದಿಂದ ತತ್ತರಿಸಿರುವ ಅಡಿಕೆ ಬೆಳೆಗಾರರ ಮನೆಗೆ ಭೇಟಿ ನೀಡಿದ್ದಾರೆ. ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಬೆಂಬಲ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯದ ಮೇಲೆ ಒತ್ತಡ ಹೇರುವುದಾಗಿ ಭರವಸೆ ತುಂಬಿದ್ದಾರೆ.

ಉಪಚುನಾವಣೆ ಬರದಿದ್ದರೆ, ಈ ನಾಯಕರೆಲ್ಲರೂ ಇತ್ತ ಸುಳಿಯುತ್ತಿದ್ದರೇ? ಎನ್ನುವುದನ್ನು ಬೇರೆ ಮಾತು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿಪಿಎಂ ಇತ್ಯಾದಿ ಪಕ್ಷಗಳು ಇಂಥವರೇ ಅಭ್ಯರ್ಥಿ ಎನ್ನುವ ಸುಳಿವು ಬಿಟ್ಟುಕೊಟ್ಟಿಲ್ಲ.

ಒಬ್ಬರ ನ್ನೊಬ್ಬರು ಕಾಯ್ದು ನೋಡುವ ಜತೆಗೆ, ಯಾರಿಗೆ ಹೆಚ್ಚು ಒಲವು? ಎನ್ನುವುದನ್ನು ಅರಿಯಲು ಪಕ್ಷದೊಳಗೆ ಆಂತರಿಕ ಸಮೀಕ್ಷೆ ನಡೆಸುತ್ತಿವೆ. ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ನೀಡಿದರೆ ಗೆಲುವು ದಕ್ಕಬಹುದೆನ್ನುವುದನ್ನು ಕಂಡುಕೊಳ್ಳಲು ಈಗಾಗಲೇ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಮಧುಸೂದನ ಮಿಸ್ತ್ರಿ ಜಿಲ್ಲೆಗೆ ಭೇಟಿ ನೀಡಿ, ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮತ್ತೊಂದು ಸುತ್ತಿನ ಸಮಾಲೋಚನಾ ಸಭೆ ನಡೆಸಲು ಪಕ್ಷದ ರಾಜ್ಯ ಮುಖಂಡರು ಮಾಜಿ ಸಚಿವ ಎಸ್.ಕೆ.ಪಾಟೀಲ್ ನೇತೃತ್ವದಲ್ಲಿ ಶನಿವಾರ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಜಯಪ್ರಕಾಶ ಹೆಗಡೆ, ವಿನಯಕುಮಾರ್ ಸೊರಕೆ, ಡಿ.ಕೆ.ತಾರಾ ದೇವಿ, ಬಿ.ಎಲ್.ಶಂಕರ್ ಹೆಸರು ಪ್ರಮುಖವಾಗಿ ಚಾಲ್ತಿಯಲ್ಲಿದೆ.

ಇನ್ನು ಬಿಜೆಪಿಯಲ್ಲಿ ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಹಾಗೂ ವಸತಿ ವಿಹಾರ ಮತ್ತು ವನ್ಯಧಾಮ ನಿಗಮ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ಉಡುಪಿಯ ಉದಯ ಕುಮಾರ್ ಶೆಟ್ಟಿ, ಕಾರ್ಕಳದ ಮಾಜಿ ಶಾಸಕ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಹಾಲಾಡಿ ಶ್ರೀನಿವಾಸಶೆಟ್ಟಿ ಹೆಸರು ಚಾಲ್ತಿಯಲ್ಲಿದೆ. ತೆಂಗುನಾರು ಮಂಡಳಿ ಅಧ್ಯಕ್ಷೆ ಹಾಗೂ ಜಿ.ಪಂ. ಸದಸ್ಯೆ ರೇಖಾ ಹುಲಿಯಪ್ಪ ಗೌಡ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಾವೂ ಕೂಡ ಆಕಾಂಕ್ಷಿ ಎನ್ನುವುದನ್ನು ಬಹಿರಂಗಪಡಿಸಿದರು. ಶಾಸಕರಾದ ಸಿ.ಟಿ.ರವಿ ಮತ್ತು ಡಿ.ಎನ್.ಜೀವರಾಜ್‌ಗೆ ಸ್ಪರ್ಧಿಸುವಂತೆ ಆರ್‌ಎಸ್‌ಎಸ್ ಮುಖಂಡರೇ ಆರಂಭದಲ್ಲಿ ಪ್ರಸ್ತಾಪ ಇಟ್ಟಿದ್ದರು. ಆದರೆ, ಈ ಇಬ್ಬರೂ ನಯವಾಗಿ ಜಾರಿಕೊಂಡಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು.

ಇನ್ನೂ ಜೆಡಿಎಸ್‌ನಲ್ಲಿ ಎಸ್.ಬಂಗಾರಪ್ಪ ಪುತ್ರ ಮಧುಬಂಗಾರಪ್ಪ, ಉಡುಪಿಯ ಅಮರನಾಥ ಶೆಟ್ಟಿ ಹೆಸರು ಕೇಳಿ ಬರುತ್ತಿವೆ. ಇದನ್ನು ಅಧಿಕೃತವಾಗಿ ಒಪ್ಪಿಕೊಳ್ಳದ ಜೆಡಿಎಸ್ ಮುಖಂಡರು `ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇನ್ನೂ ಅಧಿಕೃತ ಚರ್ಚೆಗಳು ನಡೆದಿಲ್ಲ. ಎರಡು ದಿನಗಳ ಹಿಂದೆಯಷ್ಟೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮುಖಂಡರ ಸಭೆ ನಡೆದಿದೆ. ಅಲ್ಲಿಯೂ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಆಗಲಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬದುಕಿದ್ದರೆ ಅವರೇ ಪಕ್ಷದ ಅಭ್ಯರ್ಥಿಯಾಗುತ್ತಿದ್ದರು. ಇದು ಮೊದಲೇ ತೀರ್ಮಾನ ಆಗಿತ್ತು. ಮಧುಬಂಗಾರಪ್ಪ ಅಭ್ಯರ್ಥಿಯಾದರೂ ಒಳಿತೇ~ ಎನ್ನುತ್ತಾರೆ.

ಸಿಪಿಐನಿಂದ ರಾಧಾಸುಂದರೇಶ್ ಒಬ್ಬರೇ ಏಕೈಕ ಆಕಾಂಕ್ಷಿತ ಅಭ್ಯರ್ಥಿ. ಈಗಾಗಲೇ ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೂ ಅವರಿಗೆ ಗೆಲುವು ದಕ್ಕಿಲ್ಲ. ಅದೃಷ್ಟ ಪರೀಕ್ಷೆಗೆ ಮೂರನೇ ಬಾರಿಗೆ ಪ್ರಯತ್ನ ಮಾಡುವುದು ಖಚಿತ ಎನ್ನುತ್ತವೆ ಪಕ್ಷದ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.