ADVERTISEMENT

`ಸಮಾಜದ ಕಟ್ಟಕಡೆ ವ್ಯಕ್ತಿಗೆ ಜಾಗೃತಿ ಅಗತ್ಯ'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:17 IST
Last Updated 4 ಏಪ್ರಿಲ್ 2013, 8:17 IST

ಮೂಡಿಗೆರೆ: ಮತದಾನದ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಜಾಗೃತಿ ಮೂಡಿಸುವ ಹೊಣೆ ಜವಾಬ್ದಾರಿಯುತ ಪ್ರಜೆಗಳ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕಾಂತರಾಜು ಹೇಳಿದರು.

ಪಟ್ಟಣದ ಜೇಸಿಐ ಭವನದಲ್ಲಿ ಬುಧವಾರ ವಿವಿಧ ಇಲಾಖೆಗಳ ನೇತೃತ್ವದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು, ವಲಯ ಮಟ್ಟದ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಮತದಾರರಲ್ಲಿ ಜಾಗೃತಿ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾವಂತರು ಇರುವ ಕಡೆಗಳಲ್ಲಿಯೇ ಮತದಾನದ ಶೇಕಡವಾರು ಪ್ರಮಾಣ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. ಮತದಾನದ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸ ಬೇಕಾಗಿದೆ. ತಾಲ್ಲೂಕಿನಲ್ಲಿ ಕಳೆದ ಸಾಲಿನಲ್ಲಿ ಕಡಿಮೆ ಮತದಾನವಾದ ಪ್ರದೇಶಗಳನ್ನು ಗುರುತಿಸಿಕೊಂಡು, ಶೇಕಡ ಪ್ರಮಾಣ ಹೆಚ್ಚಿಸಬೇಕು ಎಂದರು.

ತಹಶೀಲ್ದಾರ್ ರುದ್ರಪ್ಪಾಜಿರಾವ್ ಮಾತನಾಡಿ, ಪ್ರತಿ ಚುನಾವಣೆಯಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಬಹುದೊಡ್ಡ ಗೊಂದಲವಾಗುತ್ತಿತ್ತು. ಆದರೆ ಈ ಬಾರಿ ಬಿಎಲ್‌ಒಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಈಗಾಗಲೇ ತಾಲ್ಲೂಕಿನಲ್ಲಿ ನಾಲ್ಕು ಸಾವಿರ ಅರ್ಜಿಗಳು ಬಂದಿದ್ದು, ಅವುಗಳನ್ನೆಲ್ಲಾ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಕಾರ್ಯ ನಡೆಯುತ್ತಿದೆ.

ಸ್ವಸಹಾಯ ಗುಂಪುಗಳು ಭಾಗಿಯಾದರೆ ಮತದಾರರಲ್ಲಿ ಜಾಗೃತಿ ಮೂಡಿಸಲು ಸುಲಭವಾಗುತ್ತದೆ ಎಂದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜಾಥ ನಡೆಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೊಮರಯ್ಯ, ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಗಂಗಾಧರ್ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT