ADVERTISEMENT

ಸಸಿ ನೆಟ್ಟು ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 10:40 IST
Last Updated 5 ಸೆಪ್ಟೆಂಬರ್ 2011, 10:40 IST

ತರೀಕೆರೆ: ತಾಲ್ಲೂಕಿನ ದೊರನಾಳು ಗ್ರಾಮ ಪಂಚಾಯಿತಿಗೆ ಸೇರಿದ ಅತ್ತಿಗನಾಳು ಗ್ರಾಮದ ಜನತೆ ಮತ್ತು ವಿದ್ಯಾರ್ಥಿಗಳು ಸರಿಯಾದ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ರಸ್ತೆಯಲ್ಲೇ ಬತ್ತದ ಸಸಿ ನೆಟ್ಟು ಭಾನುವಾರ ಪ್ರತಿಭಟಿಸಿದರು.

ಅತ್ತಿಗನಾಳು ಗ್ರಾಮ ತರೀಕೆರೆ ಪಟ್ಟಣದ ಕೂಗಳತೆಯ ದೂರವಿದ್ದರೂ ಅಸಮರ್ಪಪಕ ರಸ್ತೆಯಿಂದಾಗಿ ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುತ್ತದೆ ಎಂದು ಗ್ರಾಮಸ್ಥರು ದೂರಿದರು. ಕಳೆದ ಮಾರ್ಚ್‌ನಲ್ಲಿ ಗ್ರಾಮದ ಕೆರೆಯ ಹೂಳು ತೆಗೆದು ರಸ್ತೆ ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಸುಳ್ಳು ಹೇಳಿ ಗುತ್ತಿಗೆದಾರರು ಹಣ ಪಡೆದು ಕೊಂಡಿದ್ದಾರೆ ಎಂದು ಗ್ರಾಮದ ಯುವಕರು ದೂರಿದರು.

ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, 5 ನೇ ತರಗತಿಯವರೆಗೆ ಮಾತ್ರ ವ್ಯಾಸಂಗ ಮಾಡಲು ಅವಕಾಶವಿದೆ.  6ನೇ ತರಗತಿಯಿಂದ ಮುಂದಕ್ಕೆ ಓದುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು, ಅವರೆಲ್ಲರೂ ತರೀಕೆರೆ ಪಟ್ಟಣದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡಲು ದಿನನಿತ್ಯ ಗ್ರಾಮದಿಂದ ಪಟ್ಟಣಕ್ಕೆ ಸಂಚರಿಸುತ್ತಾರೆ.

ಮಳೆಗಾಲದಲ್ಲಿ ಸಂಚರಿಸಲು ಸಾಧ್ಯವಿಲ್ಲದ ಕಾರಣ ಶಾಲೆ ಮಕ್ಕಳು ಗೈರು ಹಾಜರಾಗುತ್ತಿರುವುದರಿಂದ ಅವರ ಮುಂದಿನ ಭವಿಷ್ಯದ ಗತಿ ಏನು ಎಂದು ಗ್ರಾಮದ ನಿವೃತ್ತ ಶಿಕ್ಷಕ ಎಸ್.ಜಿ.ಸಿದ್ದರಾಮಯ್ಯ ಪ್ರಶ್ನಿಸಿದರು.
ಕೂಡಲೆ ರಸ್ತೆಯನ್ನು ದುರಸ್ತಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ತಾಲ್ಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ಗ್ರಾಮದ ಮುಖ್ಯಸ್ಥರಾದ ವೆಂಕಟಪ್ಪ. ಮಲ್ಲಿಕಾರ್ಜುನ್,ತಿಮ್ಮಯ್ಯ,  ಚೌಡಪ್ಪ,ನಿರ್ವಾಣಪ್ಪ,ರಾಮಣ್ಣ, ಅಪ್ಪಯ್ಯಣ್ಣ, ಯುವಕರಾದ ಲಕ್ಷ್ಮಣ್, ಕುಮಾರ್, ಗಿರೀಶ್, ಸೋಮಶೇಖರ್, ಅರುಣ್, ರವಿ ಮತ್ತು ಶಾಲಾ ವಿದ್ಯಾರ್ಥಿಗಳಾದ ಚೇತನ್, ನವೀನ್, ಮಂಜುನಾಥ್, ರಾಕೇಶ್, ರಾಘವೇಂದ್ರ, ದಿನೇಶ್, ಆದರ್ಶ ಮತ್ತ ಅಭಿಷೇಕ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.