ADVERTISEMENT

ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕ್, ಬಿಎಸ್‌ಎನ್‌ಎಲ್ ನೌಕರರ ಬೆಂಬಲ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 10:00 IST
Last Updated 29 ಫೆಬ್ರುವರಿ 2012, 10:00 IST
ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕ್, ಬಿಎಸ್‌ಎನ್‌ಎಲ್ ನೌಕರರ ಬೆಂಬಲ
ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕ್, ಬಿಎಸ್‌ಎನ್‌ಎಲ್ ನೌಕರರ ಬೆಂಬಲ   

ಚಿಕ್ಕಮಗಳೂರು: ಕಾರ್ಮಿಕ ವಿರೋಧಿ ನೀತಿ ಕೈಬಿಡಬೇಕು. ಕಾರ್ಮಿಕ ಸಮೂಹ ಎದುರಿಸುತ್ತಿರುವ ಸಾಮಾಜಿಕ ಆರ್ಥಿಕ ಮತ್ತು ಔದ್ಯಮಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಮಂಗಳವಾರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದವು.

ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಸಂಘಟನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಕರೆ ನೀಡಿದ ಅಖಿಲ ಭಾರತ ಮುಷ್ಕರ ಬೆಂಬಲಿಸಿ, ನಗರದಲ್ಲೂ ಟಿಯುಸಿಐ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಬ್ಯಾಂಕ್ ನೌಕರರು, ಬಿಎಸ್‌ಎನ್‌ಎಲ್ ನೌಕರರು ಕೂಡ ಪ್ರತಿಭಟನೆ ನಡೆಸಿದರು. ಪರಿಣಾಮ ಬ್ಯಾಂಕಿಂಗ್ ಸೇವೆ ಇಡೀ ದಿನ ಸಂಪೂರ್ಣ ಬಂದ್ ಆಗಿ ಗ್ರಾಹಕರು ಪರದಾಡುವಂ ತಾಯಿತು.

ಎಐಟಿಯುಸಿ: ಸಂತೆ ಮೈದಾನ ಬಳಿ ಇರುವ ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ನೂರಾರು ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಅಸಂಘಟಿತ ಶೆಡ್ಯೂಲ್‌ಗಳ ವ್ಯತ್ಯಾಸವಿಲ್ಲದ ಸೂಚ್ಯಂಕ ಆಧಾರಿತ ತಿಂಗಳಿಗೆ 10 ಸಾವಿರ ಕಡಿಮೆ ಇಲ್ಲದಂತೆ ಶಾಸನಬದ್ಧ ಕನಿಷ್ಠ ಕೂಲಿ ನಿಗದಿಪಡಿಸಬೇಕು. ಕನಿಷ್ಠ ವೇತನ ಕಾಯ್ದೆಗೆ ತಿದ್ದುಪಡಿ ಮಾಡಿ, ಅದರ ವ್ಯಾಪ್ತಿಯನ್ನು ಸಾರ್ವತ್ರಿಕಗೊಳಿ ಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಕಾಯಂ ಹಾಗೂ ನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಪದ್ಧತಿಯಲ್ಲಿ ನಿರ್ವ ಹಿಸುತ್ತಿರುವುದನ್ನು ರದ್ದುಪಡಿಸಬೇಕು. ಕೈಗಾರಿಕಾ ಸಂಸ್ಥೆಯಲ್ಲಿ ಕಾಯಂ ಕಾರ್ಮಿಕರಿಗೆ ನೀಡುತ್ತಿರುವ ವೇತನ, ಸೌಲಭ್ಯಗಳ ದರದಲ್ಲಿಯೆ ಗುತ್ತಿಗೆ ಕಾರ್ಮಿಕರಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಎಲ್ಲ ಕಾರ್ಮಿಕರಿಗೆ ನಿವೃತ್ತಿ ವೇತನ ಕೊಡುವುದು, 45 ದಿನಗಳ ಒಳಗಾಗಿ ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯ ನೋಂದಣಿ ಮತ್ತು ಸಂಘಟನೆ ಹಕ್ಕು ಮತ್ತು ಸಾಮೂಹಿಕ ಚೌಕಾಸಿ ಹಕ್ಕು ನಿರ್ಣಯಗಳನ್ನು ಕೇಂದ್ರ ಸರ್ಕಾರ ದೃಢೀಕರಿಸಬೇಕು, ಎಲ್ಲ ಅಸಂಘಟಿತ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಸಂಘಟನೆ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಪ್ರಧಾನಕಾರ್ಯದರ್ಶಿ ಕೆ.ಗುಣಶೇಖರನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ಸಹಕಾರ್ಯದರ್ಶಿ ಜಿ.ರಘು,  ರಾಜ್ಯಮಂಡಳಿ ಸದಸ್ಯರಾದ ಬಿ.ಅಮ್ಜದ್, ರಾಧಾ ಸುಂದರೇಶ್, ಓಬಯ್ಯ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಟಿಯುಸಿಐ:  ನಗರದ ಹಳೇ ತಾಲ್ಲೂಕು ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಮಿಕರು ಮುಖ್ಯರಸ್ತೆಯಲ್ಲಿ ಸಂಚರಿಸಿ, ಕೇಂದ್ರ ಮತ್ತು ರಾಜ್ಯ ಕಾರ್ಮಿಕ ಸಚಿವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.
ಜನವಿರೋಧಿ ಸರ್ಕಾರಗಳು ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ಕಾಯಂ ಉದ್ಯೋಗವಿಲ್ಲದೆ ಗುತ್ತಿಗೆ ಪದ್ಧತಿ ಜಾರಿಗೆ ತರುವ ಮೂಲಕ ಕನಿಷ್ಠ ವೇತನ ಇಲ್ಲದೆ ದುಡಿಸಿಕೊಳ್ಳಲಾಗುತ್ತಿದೆ.

ಕಳೆದ 15 ವರ್ಷಗಳಲ್ಲಿ ರಾಜ್ಯದಲ್ಲಿ 350ಕ್ಕೂ ಹೆಚ್ಚು ಕಾರ್ಖಾನೆಗಳು ಮುಚ್ಚಿವೆ. 2011ರಿಂದ ಇಲ್ಲಿಯವರೆಗೆ ಸುಮಾರು 68,250 ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನಿಲ್ಲಿಸುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾನಿರತರು ಹೇಳಿದರು.

ಆಹಾರ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಕಾರ್ಮಿಕ ಮುಷ್ಕರ ಹಕ್ಕನ್ನು ರಕ್ಷಿಸುವುದು, ಎಸ್‌ಈಝಡ್, ಸಿಎಂಝಡ್, ಎಸ್‌ಎಝಡ್ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಬೆಲೆ ಏರಿಕೆಗೆ ಸಮಾನಾಂತರ ವೇತನ ಹೆಚ್ಚಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ್ದ ಎಲ್ಲ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಜೀವನ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

ಗುತ್ತಿಗೆ ಕಾರ್ಮಿಕರಿಗೆ ಬೋನಸ್, ಭವಿಷ್ಯ ನಿಧಿ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಟಿಯುಸಿಐ ಜಿಲ್ಲಾ ಅಧ್ಯಕ್ಷ ಕೆ.ಎನ್.ರಮೇಶ್, ಕಾರ್ಯ ದರ್ಶಿ ವಿಜಯ್, ಅಣ್ಣಪ್ಪ, ಲೋಕೇಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿ, ಜಿಲ್ಲಾ ಬಿಎಸ್‌ಎನ್‌ಎಲ್ ನೌಕರರ ಸಂಘಗಳು ಮತ್ತು ಸಂಸ್ಥೆಗಳು, ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.