ADVERTISEMENT

ಸೈಕಲ್‌ ಯಾನ; ಸವಾರರ ಹುಮ್ಮಸ್ಸು

ರಾಜ್ಯದ ವಿವಿಧೆಡೆಯ 42 ಸವಾರರು ಭಾಗಿ– ಕ್ರಮಿಸಿದ ದೂರ 200 ಕಿ.ಮೀ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 8:58 IST
Last Updated 10 ಜುಲೈ 2017, 8:58 IST
ಸೈಕಲ್‌ ಯಾನ; ಸವಾರರ ಹುಮ್ಮಸ್ಸು
ಸೈಕಲ್‌ ಯಾನ; ಸವಾರರ ಹುಮ್ಮಸ್ಸು   

ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯ ಟೌನ್‌ ಕ್ಯಾಂಟೀನ್‌ ಬಳಿಯಿಂದ ಬ್ರೆವೆಟ್‌ ಸೈಕಲ್‌ ಯಾನವು ಬೆಳಿಗ್ಗೆ 6 ಗಂಟೆಗೆ ಹೊರಟಿತು.

ಮಂಗಳೂರು ಸೈಕ್ಲಿಂಗ್‌ ಕ್ಲಬ್‌, ಚಿಕ್ಕಮಗಳೂರು ಸೈಕ್ಲಿಂಗ್‌ ಕ್ಲಬ್‌ ಮತ್ತು ಅಲ್ ಇಂಡಿಯಾ ಡೊನ್ಯೂರ್‌್ಸ (ಎಐಆರ್‌) ಸಂಸ್ಥೆ ಸಹಯೋಗದಲ್ಲಿ ‘ಮಾನ್‌ಸೂನ್‌ ಕಾಫಿ ಮ್ಯಾಜಿಕ್‌ 200 ಕಿ.ಮೀ ಬ್ರೆವೆಟ್‌’ ಸೈಕಲ್‌ ಸವಾರಿಯಲ್ಲಿ ರಾಜ್ಯದ ವಿವಿಧೆಡೆಯ 42 ಮಂದಿ ಭಾಗವಹಿಸಿದ್ದರು.

ಚಿಕ್ಕಮಗಳೂರಿನಿಂದ ಹೊರಟು ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಹಾದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿ ತಲುಪಿ ಚಿಕ್ಕಮಗ ಳೂರಿಗೆ ವಾಪಸ್‌ ತಲುಪುವ ಗುರಿ ನಿಗದಿಪಡಿಸಲಾಗಿತ್ತು. ಹದಿಮೂರೂವರೆ ಗಂಟೆ ಅವಧಿಯಲ್ಲಿ ನಿಗದಿತ ದೂರ ಕ್ರಮಿಸುವ ಸವಾಲನ್ನು ಸವಾರರಿಗೆ ನೀಡಲಾಗಿತ್ತು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಯಾನದಲ್ಲಿ ಮುಂಚೂಣಿಯಲ್ಲಿದ್ದರು. ಚಿಕ್ಕಮಗಳೂರು, ಬೆಂಗಳೂರು, ರಾಮನಗರ, ಮೈಸೂರು, ಹಾಸನ, ಶಿವಮೊಗ್ಗ, ಕೊಡಗು ಮೊದ ಲಾದ ಜಿಲ್ಲೆಯ ಸವಾರರು ಪಾಲ್ಗೊಂಡಿದ್ದರು. ಇಬ್ಬರು ಮಹಿಳೆಯರು, ಇಬ್ಬರು ವಿದ್ಯಾರ್ಥಿಗಳು ಇದ್ದರು.

ಕುಪ್ಪಳಿ ತಲುಪಲು ಅಲ್ದೂರು, ಬಾಳೆಹೊನ್ನೂರು, ಜಯಪುರ, ಕೊಪ್ಪ, ಗಡಿಕಲ್ಲು ಮಾರ್ಗ ನಿಗದಿಪಡಿಸಲಾಗಿತ್ತು. ಓರೆಕೋರೆ, ದಿಬ್ಬ, ಇಳಿಜಾರಿನ ರಸ್ತೆ ಯಲ್ಲಿ ಸವಾರರು ಉತ್ಸಾಹದಿಂದ ಸಾಗಿ ದರು. ಸಂಜೆ 7.30ರ ಹೊತ್ತಿಗೆ ಸವಾ ರರು ಚಿಕ್ಕಮಗಳೂರಿಗೆ ವಾಪಸಾದರು. ಎಸ್ಪಿ ಸೇರಿದಂತೆ 25 ಮಂದಿ ನಿಗದಿತ ಅವಧಿಯೊಳಗೆ ಗುರಿ ತಲುಪಿದ್ದಾರೆ.

‘ಎಂಟು ವರ್ಷಗಳಿಂದ ಸೈಕಲ್‌ ರ್‌್ಯಾಲಿಗಳಲ್ಲಿ ಭಾಗವಹಿಸುತ್ತಿದ್ದೇನೆ. 10 ಕಿ.ಮೀ ಒಳಗಿನ ಸಂಚಾರಕ್ಕೆ ಸೈಕಲ್‌ ಬಳಸುತ್ತೇನೆ. ಅಂಗಡಿ, ತೋಟ, ಮೈದಾ ನಗಳಿಗೆ ಸೈಕಲ್‌ನಲ್ಲೇ ಓಡಾಡುತ್ತೇನೆ’ ಎಂದು ಚನ್ನಪಟ್ಟಣದ ವೈದ್ಯ ಆರ್‌.ಎನ್‌.ಮಲವೇಗೌಡ ಹೇಳಿದರು.

‘ಸೈಕಲ್‌ ಸವಾರಿ ಹುಮ್ಮಸ್ಸು ಮೂಡಿಸುತ್ತದೆ. ಕುಟುಂಬದಲ್ಲಿ ಎಲ್ಲರೂ ಸೈಕಲ್‌ ಬಳಸುತ್ತೇವೆ. ಆರೋಗ್ಯ ಕಾಪಾ ಡಿಕೊಳ್ಳಲು ಇದು ಸಹಕಾರಿಯಾಗಿದೆ’ ಎಂದು ಬೆಂಗಳೂರಿನ ಡಾ.ಕವಿತಾ ಅಭಿಪ್ರಾಯ ಹಂಚಿಕೊಂಡರು.

‘ಪ್ರತಿದಿನ ಸುಮಾರು 25 ಕಿ.ಮೀ ಸೈಕಲ್‌ ಸವಾರಿ ಮಾಡುತ್ತೇನೆ. ಇದು ಆನಂದ ಉಂಟುಮಾಡುತ್ತದೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಇದು ಸಹಕಾರಿಯಾಗಿದೆ’ ಎಂದು 10ನೇ ತರಗತಿ ವಿದ್ಯಾರ್ಥಿ ಜುನೇದ್ ಹಬೀಬ್‌ ಹೇಳಿದರು.

ರಾಷ್ಟ್ರೀಯ ಸೈಕ್ಲಿಂಗ್‌ನಲ್ಲಿ ಕಂಚಿನ ಪದಕ ವಿಜೇತ ಬೆಂಗಳೂರಿನ ನವೀನ್, ಬೆಂಗಳೂರು ಲೀಡ್‍ಔಟ್ ಸ್ಪೋಟ್ಸ್‌ನ ಸುನಿಲ್ ನಂಜಪ್ಪ, ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್‌ನ ಸಂಜಿತ್, ಕಾಫಿಡೇ ಸಂಸ್ಥೆಯ ವ್ಯವಸ್ಥಾಪಕ ಜಾವೆದ್, ಸಾರಗೋಡು ಆಸ್ಪತ್ರೆಯ ವೈದ್ಯ ಡಾ.ಕೌಶಿಕ್, ಕಾಫಿ ಬೆಳೆಗಾರ ಸುಮಂತ್, ಉದ್ಯಮಿ ಪ್ರತೀಕ್, ಬೆಂಗಳೂರಿನ ವೈದ್ಯ ದಂಪತಿ, ಮೂವರು ಯುವತಿಯರು ಸೈಕಲ್‌ ಸವಾರಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

***

ಆಕರ್ಷಣೆಯ ಕೇಂದ್ರಬಿಂದುವಾದ ಅಣ್ಣಾಮಲೈ
ಬಾಳೆಹೊನ್ನೂರು:
ಸೈಕ್ಲಿಂಗ್‌ನಲ್ಲಿ ಭಾಗವಹಿಸಿದ್ದ ಚಿಕ್ಕಮಗಳೂರಿನ ಜಿಲ್ಲಾ ಎಸ್ಪಿಕೆ.ಅಣ್ಣಾಮಲೈ ಎಲ್ಲ ಕಡೆಗಳಲ್ಲೂ ಆಕರ್ಷಣೆಯ ಕೇಂದ್ರಬಿಂದುವಾದರು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಸ್ಪಿ ದರ್ಜೆಯ ಅಧಿಕಾರಿಯೊಬ್ಬರು ಎಲ್ಲರಂತೆ ಸೈಕಲ್ ಮೂಲಕ 200 ಕಿ.ಮೀ. ಕ್ರಮಿಸಿದ್ದು ವಿಶೇಷವಾಗಿತ್ತು. ಬಾಳೆಹೊನ್ನೂರಿನ ಭದ್ರಾ ಕಾಫಿ ಶಾಫ್ ಬಳಿ ಅಣ್ಣಾಮಲೈ ಬರುತ್ತಿದ್ದಂತೆ ಅವರನ್ನು ಕಂಡ ಹಲವರು ಅವರೊಂದಿಗೆ ಸೆಲ್ಪಿ ತೆಗೆಸಿಕೊಳ್ಳಲು ಮುಗಿಬಿದ್ದರು. ಕೆಲ ಹೊತ್ತು ಅಲ್ಲಿ ಕಾಲ ಕಳೆದ ಅವರು ಅಲ್ಲಿಂದ ಪಟ್ಟಣದ ಮೂಲಕ ಜಯಪುರ ತೆರಳಿದರು.

ಎಲ್ಲ ಸೈಕಲ್ ಸವಾರರೂ ಬಿಡಿ ಬಿಡಿಯಾಗಿ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಮಲೆನಾಡಿನ ಅಂಕುಡೊಂಕಿನ ರಸ್ತೆಯಲ್ಲಿ ಎಲ್ಲಾ ವಯೋಮಾನದವರೂ ವಿಭಿನ್ನ ಉಡುಪು, ಹೆಲ್ಮೆಟ್‌ಗಳನ್ನು ಧರಿಸಿ ಸೈಕಲ್ ತುಳಿಯುವ ಮೂಲಕ ಹೊಸತನ ಮೆರೆದರು.

ಪಟ್ಟಣದ ಟ್ಯಾಕ್ಸಿ ನಿಲ್ದಾಣದ ಬಳಿ ಸಂಘಟನೆಯವರು ಸೈಕ್ಲಿಸ್ಟ್‌ಗಳಿಗಾಗಿ ತಂಪು ಪಾನೀಯ, ಹಣ್ಣುಗಳನ್ನು ನೀಡಿದರು. ಕವಿಮನೆಗೆ ತೆರಳಿ ವಾಪಸ್‌ ಬಾಳೆಹೊನ್ನೂರು ಮೂಲಕ ಮಧ್ಯಾಹ್ನದ ವೇಳೆ ಬರುವಾಗ ಪೊಲೀಸ್ ಠಾಣೆಯ ಎದುರಿನಲ್ಲಿ ವೃದ್ಧೆಯೊಬ್ಬರು ಎಸ್ಪಿ ಅವರಿಗೆ ಹಾರ ಹಾಕಿ, ಉತ್ತಮ ಕೆಲಸಗಳನ್ನು ಮುಂದುವರಿಸುವಂತೆ ಹಾರೈಸಿದರು.

***
ಸೈಕಲ್‌ ಸವಾರಿಯು ಖುಷಿ ನೀಡುತ್ತದೆ. ಫಿಟ್‌ನೆಸ್‌ ಕಾಯ್ದುಕೊಳ್ಳಲು ಇದು ಸಹಕಾರಿ. ಸೈಕಲ್‌ ಬಳಕೆಯತ್ತ ಜನ ಚಿತ್ತ ಹರಿಸಬೇಕು.

ಕೆ.ಅಣ್ಣಾಮಲೈ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.