ADVERTISEMENT

ಸೋನೆ ಮಳೆ: ಮುಂಗಾರು ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 9:00 IST
Last Updated 3 ಜೂನ್ 2011, 9:00 IST

ಚಿಕ್ಕಮಗಳೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ  ಗುರುವಾರ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿಯುತ್ತಿದ್ದು, ಮುಂಗಾರು ಮಳೆ ಆರಂಭದ ಮುನ್ಸೂಚನೆ ನೀಡಿದೆ.ಚಿಕ್ಕಮಗಳೂರು ನಗರದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಮಳೆ ಬಿಟ್ಟು ಬಿಟ್ಟು ಸೋನೆಯಂತೆ ಸಂಜೆವರೆಗೂ ಸುರಿಯಿತು. ಮೂಡಿಗೆರೆ, ಕಳಸ, ಆಲ್ದೂರು, ಶೃಂಗೇರಿ, ತರೀಕೆರೆಯಲ್ಲಿ ತುಂತುರು ಮ ಯಾಯಿತು. ಇಡೀ ದಿನ ಮೋಡ ಕವಿದ ವಾತಾವರಣ ನೆಲೆಸಿತ್ತು. ಮೂಡಿಗೆರೆಯಲ್ಲಿ ವರುಣನ ಆರ್ಭಟ ದಿಂದಾಗಿ ಸಂಜೆವರೆಗೂ ಸೂರ್ಯನ ದರ್ಶನ ಆಗಲಿಲ್ಲ.

ಚಿಕ್ಕಮಗಳೂರು ನಗರದ ರಸ್ತೆಗಳಂತು ಕೆಸರುಗದ್ದೆ ಹೋಲುತ್ತಿದ್ದು, ಬೈಕ್ ಸವಾರರು ಮತ್ತು ಪಾದ ಚಾರಿಗಳ ಪಾಡು ಹೇಳತೀರದಾಗಿದೆ. ಮುಂಗಾರು ಆರಂಭದಲ್ಲೇ ಇಂತಹ ಪರಿಸ್ಥಿತಿಯಾದರೆ ಇನ್ನು ಹಿಡಿದ ಜಡಿ ಮಳೆಯಲ್ಲಿ ಪಾಡೇನು ಎಂದು ನಗರವಾಸಿಗಳು ಚಿಂತೆಮಾಡುವಂತಾಗಿದೆ.
ರಸಗೊಬ್ಬರ ಮಾರಾಟ ಚುರುಕು

ಅಜ್ಜಂಪುರ: ಮುಂಗಾರು ಮಳೆಯೊಂದಿಗೆ ಹೋಬಳಿಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಇದರೊಂದಿಗೆ ಇಲ್ಲಿನ ವ್ಯವಸಾಯ ಸೇವಾ ಸಹಕಾರ ರಸಗೊಬ್ಬರ ವಿಭಾಗದಲ್ಲಿ ಮಾರಾಟ ಕೂಡ ಹೆಚ್ಚಳವಾಗಿದೆ. 

 ರಸಗೊಬ್ಬರದ ಬೆಲೆ ಹೆಚ್ಚಲಿದೆ ಎಂದು ದಾಸ್ತಾನು ಇಟ್ಟುಕೊಂಡಿದ್ದೆವು. ಈಗ ರಸಗೊಬ್ಬರವನ್ನು ಹಳೆಯ ಬೆಲೆಗೆ ಮಾರುತ್ತಿದ್ದೇವೆ. ಇದರಿಂದ ರೈತರಿಗೆ ಹರ್ಷ ತಂದಿದೆ ಎಂದು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ನಂಜುಡಪ್ಪ ತಿಳಿಸಿದರು. 

 ಜುಲೈ ಎರಡನೇ ವಾರದೊಳಗೆ ಹೆಚ್ಚು ರಸಗೊಬ್ಬರ ಮಾರಾಟವಾಗುವ ಸಂಭವಿದೆ ಎಂದು ಮಾರಾಟ ವಿಭಾಗದ ಸತೀಶ್ ತಿಳಿಸಿದರು. ಈ ವರ್ಷದ ಮಳೆಯರಾಯನ ಕೈಯಲ್ಲಿ ರೈತರ ಭವಿಷ್ಯ ಅಡಗಿದೆ. ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ ಎಂದು ರೈತ ಗವಿರಂಗಪ್ಪ ಹಾಗೂ ಮಲ್ಲಪ್ಪ, ನಾಗರಾಜ್ ಪ್ರಜಾವಾಣಿಗೆ ತಿಳಿಸಿದರು.

ಶೃಂಗೇರಿ: ಗಂಟೆ ಕಾಲ ಮಳೆ
ಶೃಂಗೇರಿ : ಗುರುವಾರ ಮಧ್ಯಾಹ್ನ ಒಂದು ಗಂಟೆಗಳು ಹೆಚ್ಚು ಕಾಲ ಮಳೆ ಸುರಿದಿದ್ದು, ನಂತರ ಇಡೀ ದಿನ ತುಂತುರು ಮಳೆಯಿಂದ ಕೂಡಿತ್ತು. ಇದರಿಂದಾಗಿ ಅಡಿಕೆ ತೋಟಗಳಿಗೆ ರಸಗೊಬ್ಬರ ನೀಡಲು ಅನುಕೂಲವಾಗಿದ್ದು, ರೈತರು ರಸಗೊಬ್ಬರ ಖರೀದಿಗೆ ಮುಂದಾಗಲಿದ್ದಾರೆ.

ಮಳೆಗಾಲದ ಕೆಲಸಕ್ಕೆ ಚುರುಕು : ಮಲೆನಾಡಿನ ಹಲವಾರು ಪ್ರದೇಶ ಈಗಲೂ ಮಳೆಗಾಲದಲ್ಲಿ ವಾಹನ ಸಂಚಾರ ಸಂಪರ್ಕ ಕಡಿತಗೊಳ್ಳಲಿದ್ದು, ಮಳೆಗಾಲದ ಕನಿಷ್ಠ 3 ತಿಂಗಳಿಗೆ ಬೇಕಾಗುವಷ್ಟು ನಿತ್ಯೋಪಯೋಗಿ ವಸ್ತುಗಳನ್ನು ಸಂಗ್ರಹಿಸಿಡಲಿದ್ದಾರೆ. ಮಳೆಗಾಲಕ್ಕಾಗಿ ಅಗತ್ಯವಿರುವ ಕಟ್ಟಿಗೆ, ಗದ್ದೆಗೆ ಹಟ್ಟಿಗೊಬ್ಬರ ಸಾಗಣೆ ಮುಂತಾದ ಚಟುವಟಿಕೆ ಚುರುಕುಗೊಂಡಿದೆ.

ಡಯಂಚ ಬೀಜಕ್ಕೆ ಬೇಡಿಕೆ :  ಭತ್ತದ ಗದ್ದೆಗೆ ಹಸಿರೆಲೆ ಗೊಬ್ಬರವಾಗಿ ಬಳಸುವ ಡಯಂಚ ಬೀಜ ಪೂರೈಕೆ ಯಾಗದೇ ರೈತರಿಗೆ ತೊಂದರೆಯಾಗಿದ್ದು, ಹಸಿರೆಲೆ ಗೊಬ್ಬರ ಬೀಜ ಬಿತ್ತಲು ಇದು ಸಕಾಲವಾಗಿದೆ.

ಮೂಡಿಗೆರೆ: ಮುಂಗಾರು ಮಳೆ

ಮೂಡಿಗೆರೆ: ತಾಲ್ಲೂಕಿನಾದ್ಯಂತ ವಾರದಿಂದ ನಿರೀಕ್ಷೆಯಲ್ಲಿದ್ದ ಮುಂಗಾರು ಮಳೆ ಗುರುವಾರದಿಂದ ಆರಂಭವಾಯಿತು. ತಾಲ್ಲೂಕಿನ ಗುತ್ತಿ, ಮೂಲರಹಳ್ಳಿ, ಗಬ್ಗಲ್, ನಿಡುವಾಳೆ, ಬಾಳೂರು, ಜಾವಳಿ, ಮಾಕೋನ ಹಳ್ಳಿ, ಗೋಣಿಬೀಡು, ದೇವರುಂದ, ಬೈರಾಪುರ, ಉರುಬಗೆ, ಕೊಟ್ಟಿಗೆಹಾರ, ಅತ್ತಿಗೆರೆ, ಮಲಯ ಮಾರುತ ಪ್ರದೇಶದಲ್ಲಿ ಜಡಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.