ADVERTISEMENT

`ಸೋಲಿನ ಭೀತಿಯಿಂದ ಸುಳ್ಳು ಆರೋಪ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 10:42 IST
Last Updated 23 ಏಪ್ರಿಲ್ 2013, 10:42 IST

ನರಸಿಂಹರಾಜಪುರ: ಸೋಲಿನ ಭೀತಿಯಿಂದ ಹತಾಶ ರಾಗಿ ಬಿಜೆಪಿ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಯ ಪರ ಮತಯಾಚನೆಗೆ ಅಡ್ಡಿ ಪಡಿಸುತ್ತಿದ್ದಾರೆಂದು ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.
ಇಲ್ಲಿನ ಕಾಂಗ್ರೆಸ್‌ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ತಾಲ್ಲೂಕಿನಾದ್ಯಂತ  ಕಾಂಗ್ರೆಸ್ ಪರ ಅಲೆಯಿದ್ದು ಎಲ್ಲಾ ಗ್ರಾಮಗಳಲ್ಲಿ ಜನರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಜನರಿಂದ ಜನರಿಗಾಗಿ ಜನರಿಗೊಸ್ಕರ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕಾಂಗ್ರೆಸ್ ಪಕ್ಷದ ಪರವಾಗಿ ಮಲೆನಾಡು ಪ್ರಜಾವೇದಿಕೆ ಮತ್ತು ಕೆಲವು ಚಿಂತಕರ ಸಂಘಟನೆಯ ಮುಖಂಡರು ಸೋಮವಾರ ತಾಲ್ಲೂಕಿನ ಮೂಡಬಾಗಿಲು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಮತಯಾಚಿಸಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಕೆಲವು ಮುಖಂಡರು ಮತದಾನ ಕೇಳುವ ಹಕ್ಕು ನಿಮಗಿಲ್ಲ ನಮ್ಮ ಗ್ರಾಮದಲ್ಲಿ ಮತ ಕೇಳ ಬೇಡಿ ಎಂದು ಅಡ್ಡಿಪಡಿಸಿ ಪ್ರಜಾಪ್ರಭುತ್ವಕ್ಕೆ ಅಪಮಾನವಾಗುವ ರೀತಿಯಲ್ಲಿ ವರ್ತಿಸಿದರು ಎಂದು ಆರೋಪಿಸಿದರು.

ಬಿಜೆಪಿಯವರ ಈ ರೀತಿಯ ವರ್ತನೆಯನ್ನು ಕಾಂಗ್ರೆಸ್ ಅತ್ಯಂತ ಕಠಿಣ ಪದಗಳಿಂದ ಖಂಡಿಸುತ್ತದೆ ಎಂದರು. ಬಿಜೆಪಿಯವರಿಗೆ ಸೋಲು ಕಣ್ಣಮುಂದಿರುವುದರಿಂದ ಹತಾಶರಾಗಿ ತಾಲ್ಲೂಕಿನ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಶಾಂತಿಯುತ ಮತದಾನವನ್ನು ಬಯುಸುತ್ತದೆ ಎಂದರು.

ಕಾಂಗ್ರೆಸ್ ಸಂಘಟನೆ ಬಲವಾಗಿದ್ದು, ಕಾರ್ಯಕರ್ತರು ಬಿಜೆಪಿಯವರ ಇಂತಹ ಬೆದರಿಕೆಗಳಿಗೆ ಹೆದರದೆ ಕಾಂಗ್ರೆಸ್ ಪರವಾಗಿರುವ ಜನಾಭಿಪ್ರಾ ಯವನ್ನು ಮತವಾಗಿ ಪರಿಗಣಿಸಿ ಟಿ.ಡಿ.ರಾಜೇಗೌಡ ಗೆಲುವಿಗೆ ಪ್ರಯತ್ನಿಸಬೇಕು. ಬಿಜೆಪಿಯವರ ಕಾನೂನು ಬಾಹಿರವರ್ತನೆಯನ್ನು ಕಾಂಗ್ರೆಸ್ ಪ್ರಜಾಪ್ರಭುತ್ವ ಮಾರ್ಗದಲ್ಲಿಯೇ ಎದುರಿಸಲಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎಂ.ಗಂಗಾಧರ್, ಅಫ್ರೋಜ್, ಟಿ.ವಿ.ರಾಜು ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.