ADVERTISEMENT

ಸೌಕರ್ಯ ಕೊರತೆ; ಪ್ರಯಾಣಕರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 6:15 IST
Last Updated 21 ಅಕ್ಟೋಬರ್ 2017, 6:15 IST
ಚಿಕ್ಕಮಗಳೂರು ಖಾಸಗಿ ಬಸ್‌ ನಿಲ್ದಾಣ
ಚಿಕ್ಕಮಗಳೂರು ಖಾಸಗಿ ಬಸ್‌ ನಿಲ್ದಾಣ   

ಚಿಕ್ಕಮಗಳೂರು: ಮೂಲಸೌಕರ್ಯಗಳು ಇಲ್ಲದೆ ನಗರದ ಕುವೆಂಪು ಕಲಾ ಮಂದಿರದ ಹಿಂಭಾಗದ ಖಾಸಗಿ ಬಸ್‌ ನಿಲ್ದಾಣ ಸೊರಗಿದೆ. ಶೌಚಾಲಯ, ಕುಡಿಯುವ ನೀರು, ವಿದ್ಯುತ್ ದೀಪ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ.

ನಗರದ ಹೃದಯ ಭಾಗದಲ್ಲಿ ಈ ನಿಲ್ದಾಣ ಇದೆ. ವಿದ್ಯಾರ್ಥಿಗಳು, ಕೂಲಿಕಾರರು, ಹಳ್ಳಿ ಜನರು ನಿಲ್ದಾಣದಿಂದ ಸಂಚರಿಸುತ್ತಾರೆ. ನಿಲ್ದಾಣದಲ್ಲೇ ಮಲ, ಮೂತ್ರ ವಿಸ ರ್ಜಿಸುವುದರಿಂದ ದುರ್ನಾತದ ಕೊಂಪೆ ಯಾಗಿದ್ದು, ಪ್ರಯಾಣಿಕರು ಮೂಗು ಮುಚ್ಚಿಕೊಂಡು ನಿಲ್ಲುವ ಸ್ಥಿತಿ ಇದೆ.

ಈ ನಿಲ್ದಾಣದಿಂದ ನಿತ್ಯ ಸುಮಾರು 50 ಬಸ್ಸುಗಳ ವಿವಿಧೆಡೆಗೆ ಸಂಚರಿಸುತ್ತವೆ. ಜಿಲ್ಲೆಯ ಅತ್ತಿಗುಂಡಿ, ಗಿರಿಶ್ರೇಣಿಯ ಹಳ್ಳಿಗಳಿಗೆ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಸೌಕರ್ಯ ಇಲ್ಲ.
ಈ ಭಾಗದಲ್ಲಿ ಖಾಸಗಿ ಬಸ್ಸುಗಳ ಸಂಚರಿಸುತ್ತವೆ. ಶಿವಮೊಗ್ಗ, ದಾವಣಗೆರೆ, ಬೀರೂರು, ತರೀಕೆರೆ, ಭದ್ರಾವತಿ ಖಾಸಗಿ ಬಸ್ಸುಗಳು ಸಂಚರಿಸುತ್ತವೆ.

ADVERTISEMENT

ಈ ನಿಲ್ದಾಣಕ್ಕೆ ಹೊಂದಿಕೊಂಡಂತೆ, ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ನಿಲ್ದಾಣ, ಮಿಲನ ಚಿತ್ರಮಂದಿರ ಇವೆ. ಚಿತ್ರಮಂದಿರದ ಬದಿ, ಬಸ್‌ ನಿಲ್ದಾಣದ ಹಿಂಭಾಗ, ಕುವೆಂಪು ಕಲಾಮಂದಿರದ ಕಾಂಪೌಂಡ್‌ಗಳು ಪ್ರಯಾಣಿಕರ ಮಲಮೂತ್ರ ವಿಸರ್ಜನೆ ತಾಣಗಳಾಗಿವೆ. ಕುಡಿಯುವ ನೀರಿಗಾಗಿ ನಿಲ್ದಾಣದ ಬಳಿಯ ಕ್ಯಾಂಟೀನ್‌ಗಳ ಮೊರೆ ಹೋಗಬೇಕಿದೆ.

ಟ್ಯಾಕ್ಸಿ ಸ್ಟ್ಯಾಂಡ್‌ ಹಿಂಭಾಗದ ಕಸದ ರಾಶಿಗಳ ನಡುವೆ ಪ್ರಯಾಣಿಕರು ಮಲ, ಮೂತ್ರ ವಿಸರ್ಜಿಸುತ್ತಾರೆ. ಶೌಚಾಲಯ ನಿರ್ಮಾಣಕ್ಕೆ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ ಎಂದು ನಿರ್ವಾಹಕ ವಸಂತ್ ಅಳಲು ತೋಡಿಕೊಂಡರು.

ನಿರ್ವಹಣೆ ಕೊರತೆಯಿಂದ ನಿಲ್ದಾಣದ ಕಟ್ಟಡದ ಮೇಲೆ ಗಿಡಗಂಟಿಗಳು ಬೆಳೆದಿವೆ. ಕಟ್ಟಡದ ಒಳಗೆ ಕೂರುವ ಹಾಸಿನ ಮೇಲೆ ಭಿಕ್ಷುಕರು, ಮದ್ಯವ್ಯಸನಿಗಳು ಪವಡಿಸಿರುತ್ತಾರೆ. ಬಿಡಾಡಿಗಳ ಕಾಟವೂ ಇದೆ. ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರಿಗೆ ಕಿರಿಕಿರಿ ನಿತ್ಯದ ಬವಣೆಯಾಗಿದೆ.

‘ಕ್ಯಾಂಟೀನ್‌ಗೆ ವ್ಯಾಪಾರವಾಗಲಿ ಎಂದು ಪ್ರಯಾಣಿಕರು ಕೇಳಿದಾಗ ನಾವೇ ನೀರು ಕೊಡುತ್ತೇವೆ. ಈ ನಿಲ್ದಾಣದ ರಸ್ತೆಯಲ್ಲಿ ಒಂದೇ ವಿದ್ಯುತ್ ದೀಪ ಇದೆ. ರಾತ್ರಿ 7.45 ಕ್ಕೆ ಕಡೆಯ ಬಸ್ಸು ಹೊರಡುತ್ತದೆ. ಕತ್ತಲಿನಲ್ಲೇ ಮಹಿಳೆಯರು, ಮಕ್ಕಳು ಬಸ್ಸು ಕಾಯಬೇಕಿದೆ’ ಎಂದು ಈಶ್ವರಿ ಕ್ಯಾಂಟೀನ್ ಮಾಲೀಕ ಸುಬ್ರಹ್ಮಣ್ಯ ತಿಳಿಸಿದರು.

ರಾಮನಹಳ್ಳಿಗೆ ಖಾಸಗಿ ಬಸ್ಸಿನಲ್ಲೇ ಹೋಗಬೇಕು. ಈ ನಿಲ್ದಾಣ ದಲ್ಲಿ ಕೂರಲು ಆಸನ ವ್ಯವಸ್ಥೆ ಸರಿ ಇಲ್ಲ. ಬಿಸಿಲಿನಲ್ಲಿ ನಿಲ್ಲಬೇಕು. ನೀರಿನ ವ್ಯವಸ್ಥೆ ಇಲ್ಲ. ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸಲು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಪ್ರಯಾಣಿಕರಾದ ಈಶ್ವರಿ ಕುಮಾರಿ ಒತ್ತಾಯಿಸಿದರು.

ಜಿಲ್ಲಾ ಕೇಂದ್ರದ ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಸಮಸ್ಯೆಯ ಗಂಭೀರತೆ ಅರಿತು ಶೌಚಾಲಯ ನಿರ್ಮಿಸಲು ಇಲ್ಲಿನ ಜನಪ್ರತಿನಿಧಿಗಳು ಕ್ರಮವಹಿಸಬೇಕು ಎಂದು ಪ್ರಯಾಣಿಕ ಶಿವಕುಮಾರ್ ಆಗ್ರಹಿಸಿದರು.

ಸಿ.ಎಸ್‌.ಅನಿಲ್‌ಕುಮಾರ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.