ADVERTISEMENT

ಸ್ವಾತಂತ್ರ್ಯ ಹೋರಾಟದ ಸಂಕೇತ ಖಾದಿ

ಖಾದಿ ಉತ್ಸವ: ಜಿಲ್ಲಾ ಪಂಚಾಯಿತಿ ಸಿಇಒ ಸಿ. ಸತ್ಯಭಾಮಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 6:51 IST
Last Updated 16 ಮಾರ್ಚ್ 2018, 6:51 IST
ಖಾದಿ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ರೋಷನ್‌ ಬೇಗ್‌ ಅವರು ಬಟ್ಟೆ ನೇಯ್ಗೆ ಪ್ರಕ್ರಿಯೆ ವೀಕ್ಷಿಸಿದರು. ರಾಜ್ಯ ಖಾದಿ ಮತ್ತು ಗ್ರಾಮೋದ್ಯೊಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮಾ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಹನೀಫ್ ಇದ್ದಾರೆ.
ಖಾದಿ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ರೋಷನ್‌ ಬೇಗ್‌ ಅವರು ಬಟ್ಟೆ ನೇಯ್ಗೆ ಪ್ರಕ್ರಿಯೆ ವೀಕ್ಷಿಸಿದರು. ರಾಜ್ಯ ಖಾದಿ ಮತ್ತು ಗ್ರಾಮೋದ್ಯೊಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮಾ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಹನೀಫ್ ಇದ್ದಾರೆ.   

ಚಿಕ್ಕಮಗಳೂರು: ದೇಶದ ಸ್ವಾತಂತ್ರ್ಯ ಹೋರಾಟದ ಸಂಕೇತ ಮತ್ತು ಸ್ವದೇಶಿ ಪ್ರತೀಕ ಖಾದಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮಾ ಬಣ್ಣಿಸಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಜ್ರ ಮಹೋತ್ಸವದ ಅಂಗವಾಗಿ ನಗರದ ನೇತಾಜಿ ಸುಭಾಷ್‌ಚಂದ್ರಬೋಸ್ ಮೈದಾನದಲ್ಲಿ ಖಾದಿ ಉತ್ಸವ (ಖಾದಿ, ಗ್ರಾಮೊದ್ಯೋಗ ವಸ್ತು ಪ್ರದರ್ಶನ, ಮಾರಾಟ) ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಉಷ್ಣ ಕಾಲೇ ಶೀತಂ, ಶೀತ ಕಾಲೇ ಉಷ್ಣಂ, ಇದುವೇ ಖಾದಿ ವಸ್ತ್ರಂ’ ಘೋಷವಾಕ್ಯವು ಮನನೀಯವಾಗಿದೆ. ಖಾದಿ ಉತ್ಪನ್ನಗಳು ನಮ್ಮವು ಎಂಬ ಹೆಮ್ಮೆ ಮೂಡುತ್ತದೆ. ಖಾದಿ ಬಟ್ಟೆ ಧಾರಣೆ ಖುಷಿ ನೀಡುತ್ತದೆ. ಖಾದಿ ವಸ್ತ್ರಗಳನ್ನು ಬಳಸಲು ಬಹಳಷ್ಟು ಜನ ಇಚ್ಛಿಸುತ್ತಾರೆ ಎಂದು ತಿಳಿಸಿದರು.

ಖಾದಿಯು ದೇಸಿ ಕರಕುಶಲ ಕಾರ್ಮಿಕರ ಕೊಡುಗೆ. ರಾಜಕಾರಣಿಗಳು ಮೊದಲಾದವರು ಖಾದಿಯನ್ನು ಹೆಚ್ಚಾಗಿ ಧರಿಸುತ್ತಾರೆ. ಖಾದಿಗೆ ಉತ್ತಮ ಭವಿಷ್ಯ ಇದೆ. ಕಾಲಕ್ಕೆ ತಕ್ಕಂತೆ ಮಾರ್ಪಾಡಾಗಿ ಮೇರುಘಟ್ಟಕ್ಕೆ ತಲುಪುತ್ತಿದೆ. ಭವಿಷ್ಯದಲ್ಲಿಯೂ ಖಾದಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಿದರು.

ADVERTISEMENT

ರಾಜ್ಯ ಖಾದಿ ಮತ್ತು ಗ್ರಾಮೋದ್ಯೊಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ಗುಡಿಕೈಗಾರಿಕೆಯಂಥ ಉಪಕಸುಬುಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬಹುದು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಅದರ ಫಲವಾಗಿ ಖಾದಿ ಮಂಡಳಿ ಸ್ಥಾಪನೆ ಸಾಧ್ಯವಾಯಿತು ಎಂದರು.

ವಲಯ, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಖಾದಿ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಜನರು ಖಾದಿ ಉತ್ಪನ್ನಗಳನ್ನು ಕೊಳ್ಳುವುದರಿಂದ ಉದ್ದಿಮೆಯನ್ನು ಉಳಿಸಬಹುದು. ಕರ್ನಾಟಕದಲ್ಲಿ 49 ಖಾದಿ ಉದ್ದಿಮೆಗಳು, 6,008 ಗುಡಿಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ ಇದರಿಂದ 29 ಸಾವಿರ ಮಂದಿಗೆ ಉದ್ಯೋಗ ಲಭಿಸಿದೆ ಎಂದು ಹೇಳಿದರು.

ದೇಶದಲ್ಲಿಯೇ ಉತ್ತಮ ಖಾದಿ ಉದ್ದಿಮೆ ಪ್ರಶಸ್ತಿಯನ್ನು ಕರ್ನಾಟಕ ಖಾದಿ ಉದ್ಯಮವು 2014–15ನೇ ಸಾಲಿನಲ್ಲಿ ಪಡೆದಿದೆ. ಈ ಬಾರಿ ಸಮಯಕ್ಕೆ ಸರಿಯಾಗಿ ಖಾದಿ ಉತ್ಸವವನ್ನು ನಡೆಸಲು ಸಾಧ್ಯವಾಗಿದೆ. ಖಾದಿ ವಸ್ತ್ರವನ್ನು ಧರಿಸುವುದು ಆರೋಗ್ಯಕ್ಕೂ ಒಳ್ಳೆಯದು. ಉತ್ಸವದಲ್ಲಿ ಒಂದೇ ಸೂರಿನಡಿ ಲಕ್ಷಾಂತರ ಖಾದಿ ಉತ್ಪನ್ನಗಳನ್ನು ಉತ್ಪಾದಕರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಗದಗ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ ವಿವಿಧ ಜಿಲ್ಲೆಗಳ ಕುಶಲಕರ್ಮಿಗಳ ಕೈಚಳಕದಲ್ಲಿ ಸಿದ್ಧವಾದ ಖಾದಿ ಉತ್ಪನ್ನಗಳು ಉತ್ಸವದಲ್ಲಿ ಲಭ್ಯ ಇವೆ. ಖಾದಿ ಬಟ್ಟೆ, ಉಡುಪು, ಸೀರೆಗಳು, ಬೆಡ್‌ಶೀಟುಗಳು, ಕೈ ಚೀಲಗಳು ಮೊದಲಾದವು ಇವೆ. 100ಕ್ಕೂ ಹೆಚ್ಚು ಮಳಿಗೆಗಳು ಇವೆ.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್, ಖಾದಿ ವಸ್ತು ಸಮಿತಿಯ ಅಧ್ಯಕ್ಷ ಜಿ.ಜಿ. ತಿಪ್ಪೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.