ADVERTISEMENT

ಹದಗೆಟ್ಟ ರಸ್ತೆ: ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ

ಈ ವರ್ಷ ನಮ್ಮೂರಿಗೆ ಬೂತ್‌ಗಳು ಬರುವುದು ಬೇಡ..!

ರವಿ ಕೆಳಂಗಡಿ
Published 6 ಮಾರ್ಚ್ 2018, 10:54 IST
Last Updated 6 ಮಾರ್ಚ್ 2018, 10:54 IST
ಕಳಸ–ಕಳಕೋಡು ಗ್ರಾಮದ ರಸ್ತೆಯ ದುಃಸ್ಥಿತಿ.
ಕಳಸ–ಕಳಕೋಡು ಗ್ರಾಮದ ರಸ್ತೆಯ ದುಃಸ್ಥಿತಿ.   

ಕಳಸ: ಇಲ್ಲಿನ ಕಳಸ–ಕಳಗೋಡು ರಸ್ತೆ ದುರಸ್ತಿಯಾಗದಿರುವುದರಿಂದ ತಾಲ್ಲೂಕಿ ನ ಕಳಕೋಡು, ಕೊಳಮಗೆ, ಆಚೆಕಳ ಕೋಡು, ಚಿಪ್ಪಲಮಗೆ ಗ್ರಾಮಸ್ಥರು ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿ ಸಲು ನಿರ್ಧರಿಸಿದ್ದಾರೆ.

200ಕ್ಕೂ ಹೆಚ್ಚು ಮಂದಿ ಭಾನುವಾರ ಸಂಜೆ ಕಳಕೋಡು ಸೇತುವೆಯ ಮೇಲೆ ನೆರೆದಿದ್ದರು. ಎಲ್ಲರ ಮುಖದಲ್ಲೂ ಅಸಮಾಧಾನ ಮತ್ತು ಬೇಸರವೇ ತುಂಬಿತ್ತು. ಹಲವು ವರ್ಷಗಳಿಂದ ತಮ್ಮ ಗ್ರಾಮದ ರಸ್ತೆಯನ್ನು ದುರಸ್ತಿಗೊಳಿಸಿಲ್ಲ ಎಂಬ ಸಿಟ್ಟು ಅವರೆಲ್ಲರ ಮುಖದಲ್ಲಿ ಸ್ಪಷ್ಟವಾಗಿತ್ತು. ‘ನಮ್ಮ ಊರಿಗೆ ರಸ್ತೆ ಸರಿಯಾಗಿ ಮಾಡಿಕೊಡಿ. ಇನ್ನೇನೂ ನಾವು ಯಾರಲ್ಲೂ ಕೇಳಲ್ಲ' ಎಂದು ಕೃಷಿಕ ಧರ್ಮಪಾಲಯ್ಯ ಮನವಿ ಮಾಡಿಕೊಂಡರು.

'ಹೊನ್ನೆಕಾಡಿನ ನೀರನ್ನು ಕಳಸಕ್ಕೆ ತಗೊಂಡು ಹೋದಿರಿ. ನಮ್ ರಸ್ತೆ ಗುಂಡಿ ಬಿದ್ದು ಹೋಯ್ತು, ಚರಂಡಿ ಹಾಳಾಯ್ತು. ಆದರೆ ನಮಗೆ ರಸ್ತೆ ರಿಪೇರಿ ಮಾಡಿಕೊಡಲೇ ಇಲ್ಲ' ಎಂದು ಜೆಡಿಎಸ್ ಮುಖಂಡ ವರ್ಧಮಾನಯ್ಯ ಅಸಮಾಧಾನ ಹೊರಹಾಕಿದರು. 'ನಾವು ರಸ್ತೆ ರಿಪೇರಿಗೆ ಶಾಸಕರನ್ನು ಒತ್ತಾಯ ಮಾಡಿ ₹25 ಲಕ್ಷ ಇಡಿಸಿದ್ದೀವಿ. ಆದರೆ ಅಧಿಕಾರಿಗಳು ಇನ್ನೂ ಎಸ್ಟಿಮೇಟ್ ತಯಾರಿಸಿಯೇ ಇಲ್ಲ' ಎಂದು ಸಂಸೆ ಗ್ರಾಮ ಪಂಚಾಯಿತಿ ಸದಸ್ಯ ಕಳಕೋಡು ರವಿಕುಮಾರ್ ಕೂಡ ಅಸಹಾಯಕತೆ ತೋರ್ಪಡಿಸಿದರು.

ADVERTISEMENT

'ನಾನು ಮೋಟಮ್ಮ ಅವರಿಗೆ ಮನವಿ ಮಾಡಿ ಈ ರಸ್ತೆಗೆ ₹1 ಕೋಟಿ ತಂದೆ. ಆದರೆ 5 ತಿಂಗಳು ಆದರೂ ಈ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಡೆಸದೆ ಕಾಮಗಾರಿ ಶುರು ಆಗಲೇ ಇಲ್ಲ' ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಕೆ.ಸಿ.‌ಧರಣೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ನೆರೆದಿದ್ದ ಗ್ರಾಮಸ್ಥರೆಲ್ಲರೂ, 'ಯಾರು ದುಡ್ಡು ಇಟ್ಟರೇನು. ಕೆಲಸ ಆಗಲೇ ಇಲ್ಲಲ್ಲ. ಈ ವರ್ಷ ಎಲ್ಲರೂ ಚುನಾವಣಾ ಬಹಿಷ್ಕಾರ ಹಾಕುವ ಮೂಲಕ ಸರ್ಕಾರಕ್ಕೆ ನಮ್ಮ ದನಿ ಮುಟ್ಟಿಸೋಣ' ಎಂದು ಅಭಿಪ್ರಾಯಪಟ್ಟರು. ಅಲ್ಲಿ ನೆರೆದಿದ್ದ ಬಹುತೇಕ ಜನರು ಇದಕ್ಕೆ ಸಮ್ಮತಿಸಿ 'ಈ ವರ್ಷ ನಮ್ಮೂರಿಗೆ ಬೂತ್ ಬರುವುದೇ ಬೇಡ' ಎಂದರು.

‘560 ಮತಗಳು ಇರುವ ಕಳಕೋಡು ಮತಕೇಂದ್ರದಲ್ಲಿ ಒಂದೂ ಮತ ಚಲಾವಣೆ ಆಗದಂತೆ ನಾವು ಜನರ ಮನ ಒಲಿಸೋಣ. ಹೀಗಾದರೆ ಮಾತ್ರ ಸರ್ಕಾರ ನಮ್ಮನ್ನು ಗಮನಿಸುತ್ತದೆ’ ಎಂಬ ಒಟ್ಟು ಅಭಿಪ್ರಾಯಕ್ಕೂ ಬರಲಾಯಿತು.

ಯಾವುದೇ ರಾಜಕೀಯ ಪಕ್ಷದ ಮಾತಿಗೂ ಮನ್ನಣೆ ನೀಡದೆ ಎಲ್ಲರೂ ಒಮ್ಮತದಿಂದ ಮತ್ತು ಪಕ್ಷಾತೀತವಾಗಿ ಚುನಾವಣೆ ಬಹಿಷ್ಕಾರ ಮಾಡುವ ಬಗ್ಗೆ ಗ್ರಾಮಸ್ಥರು ನಿರ್ಣಯ ಕೈಗೊಂಡರು. ಚುನಾವಣೆ ಅಧಿಸೂಚನೆ ಪ್ರಕಟಣೆ ಆಗುವ ಒಳಗೆ ಜಿಲ್ಲಾಧಿಕಾರಿ ಮಧ್ಯಪ್ರ ವೇಶಿಸಿ ರಸ್ತೆ ಕಾಮಗಾರಿ ನಡೆಸಿ ದರೆ ಆನಂತರ ಮತದಾನದ ಬಗ್ಗೆ ಆಲೋ ಚನೆ ಮಾಡೋಣ ಎಂದರು.

ಕಳಸದಿಂದ ಕಳಕೋಡು ಗ್ರಾಮಕ್ಕೆ ಹದಗೆಟ್ಟ ರಸ್ತೆಯಲ್ಲಿ ಹೋಗಿ ಬರುವಾಗ ವಾಹನಕ್ಕೆ ತಗುಲುವ ಆಘಾತ ಮತ್ತು ದೇಹಕ್ಕೆ ಆಗುವ ಆಯಾಸದ ಅನುಭವ ಪತ್ರಕರ್ತರಿಗೂ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.