ADVERTISEMENT

ಹದ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ

ಕಾಫಿನಾಡಿನಲ್ಲಿ ವರುಣ ಕೃಪೆ– ರೈತರ ಮೊಗದಲ್ಲಿ ಮಂದಹಾಸ

ಬಿ.ಜೆ.ಧನ್ಯಪ್ರಸಾದ್
Published 22 ಮೇ 2018, 10:57 IST
Last Updated 22 ಮೇ 2018, 10:57 IST
ಚಿಕ್ಕಮಗಳೂರಿನ ಕಳಾಸಪುರದ ಕೆರೆಗೆ ಕೊಂಚ ನೀರು ಬಂದಿದೆ.
ಚಿಕ್ಕಮಗಳೂರಿನ ಕಳಾಸಪುರದ ಕೆರೆಗೆ ಕೊಂಚ ನೀರು ಬಂದಿದೆ.   

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕೆಲ ದಿನಗಳಿಂದ ವರುಣ ಕೃಪೆ ತೋರಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಿತ್ತನೆ ಚಟುವಟಿಕೆಗಳು ಗರಿಗೆದರಿವೆ.

ಜಿಲ್ಲೆಯಲ್ಲಿ ಈ ಬಾರಿ ಜನವರಿಯಿಂದ ಈವರೆಗೆ (ಮೇ 21) ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ವಾಡಿಕೆ ಮಳೆ 145.4 ಮಿಲಿ ಮೀಟರ್‌, ಈವರೆಗೆ 266 ಮಿ.ಮೀ ಮಳೆಯಾಗಿದೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1,50,560 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಈವರೆಗೆ 5,897 (ಶೇ 3.9) ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಡೂರು ತಾಲ್ಲೂಕಿನಲ್ಲಿ 4475, ತರೀಕೆರೆ ತಾಲ್ಲೂಕಿನಲ್ಲಿ 850, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 572 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಜೋಳ, ಶೇಂಗಾ, ಎಳ್ಳು, ಸೂರ್ಯಕಾಂತಿ, ಅಲಸಂದೆ, ಉದ್ದು, ಹೆಸರು, ಹತ್ತಿ, ಭತ್ತ, ತೊಗರಿ ಬಿತ್ತನೆ ನಡೆದಿದೆ.

ADVERTISEMENT

‘ಜಿಲ್ಲೆಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ 50 ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಗೊಬ್ಬರ ಖರೀದಿ ನಿಟ್ಟಿನಲ್ಲಿ ರೈತರು ಆಧಾರ್‌ ಚೀಟಿಯನ್ನು ಕಡ್ಡಾಯ ತೋರಿಸಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರ್ನಾಲ್ಕು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಅನ್ನದಾತರು ಕಂಗಾಲಾಗಿದ್ದರು. ವರುಣನ ಕೃಪೆಯಿಂದಾಗಿ ಅನ್ನದಾತರು ಜಮೀನು ಹದ ಮಾಡಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಕೆರೆಗಳಿಗೂ ಸ್ವಲ್ಪ ನೀರಾಗಿದ್ದು, ಜಾನುವಾರುಗಳಿಗೆ ಅನುಕೂಲವಾಗಿದೆ.

ಬಯಲು ಸೀಮೆ ಭಾಗದ ತರೀಕೆರೆ, ಅಜ್ಜಂಪುರ, ಕಡೂರು ಭಾಗದಲ್ಲಿ ಬಿತ್ತನೆ ಚುರುಕುಗೊಂಡಿದೆ. ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ, ಕಳಸಾಪುರ ಭಾಗದಲ್ಲೂ ಶುರುವಾಗಿದೆ.

ತಾಲ್ಲೂಕುವಾರು ಚಿಕ್ಕಮಗಳೂರು 19,460, ಮೂಡಿಗೆರೆ 8,000, ಕೊಪ್ಪ 5,000, ಶೃಂಗೇರಿ 2,500, ಎನ್‌.ಆರ್‌.ಪುರ 5,200, ತರೀಕೆರೆ 41,700 ಹಾಗೂ ಕಡೂರು 68,700 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆಗಳ ಬಿತ್ತನೆ ಚಟುವಟಿಕೆಗಳು ನಡೆಯಲಿವೆ.

‘ಚುನಾವಣೆ ಗುಂಗು ಮುಗಿದಿದೆ. ಅನ್ನದಾತರ ಗಮನ ಕೃಷಿ ಕಡೆಗೆ ಹರಿದಿದೆ. ಹದ ಮಳೆಯಾಗಿದ್ದು, ಕೆರೆ, ಕಟ್ಟೆ, ಹೊಂಡಗಳಲ್ಲಿ ಕೊಂಚ ನೀರಾಗಿದೆ. ಕೆಲ ವರ್ಷಗಳಿಂದ ಮಳೆ ಇಲ್ಲದೇ ರೈತರು ಪರಿತಪಿಸಿದ್ದರು. ಜಮೀನುಗಳನ್ನು ಹದ ಮಾಡಿಕೊಂಡು ಮಳೆಗಾಗಿ ಪ್ರಾರ್ಥಿಸಿದ್ದರು. ಮಳೆಯಾಗಿರುವುದು ಹುರುಪು ತಂದಿದೆ. ನೆಲಗಡಲೆ, ಜೋಳ ಮೊದಲಾದ ಬಿತ್ತನೆ ನಡೆದಿದೆ’ ಎಂದು ಕಳಸಾಪುರದ ರೈತ ಚಂದ್ರಶೇಖರ್‌ ತಿಳಿಸಿದರು.

‘ಕೆಲ ದಿನಗಳಿಂದ ಮಳೆಯಾಗಿರುವುದು ಬೆಳೆಗಾರರಿಗೆ ವರದಾನವಾಗಿದೆ. ಕಾಫಿ, ಕರಿಮೆಣಸು, ಅಡಿಕೆ ಎಲ್ಲ ಬೆಳೆಗೂ ಅನುಕೂಲವಾಗಿದೆ. ಫಸಲು ಚೆನ್ನಾಗುತ್ತದೆ. ನಮ್ಮ ಭಾಗದಲ್ಲಿ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ತೋಟಗಳಿಗೆ ಗೊಬ್ಬರ, ಔಷಧ ಸಿಂಪಡಣೆ ಮೊದಲಾದ ಕಾಯಕಗಳಿಗೆ ಕಾರ್ಮಿಕರು ಸಿಗುತ್ತಿಲ್ಲ’ ಎಂದು ಮೂಡಿಗೆರೆಯ ಬೆಳೆಗಾರ ರಮೇಶ್‌ ಹಳೇಕೋಟೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.