ADVERTISEMENT

ಹಾಲಿನೊಂದಿಗೆ ಜೇನು ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:18 IST
Last Updated 20 ಸೆಪ್ಟೆಂಬರ್ 2013, 9:18 IST

ಕೊಪ್ಪ:  ರಾಜ್ಯ ಸರ್ಕಾರದ ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲಿನೊಂದಿಗೆ ಜೇನು ವಿತರಿಸುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ಗುರುವಾರ ಇಲ್ಲಿನ ಗಿರಿಜನ ವಿವಿಧೋ­ದ್ದೇಶ ಸಹಕಾರ ಸಂಘ (ಲ್ಯಾಂಪ್ಸ್) ಬಾಳಗಡಿಯಲ್ಲಿ ನೂತನ­ವಾಗಿ ಆರಂಭಿಸಿರುವ ೩೦೦ ಕೆ.ಜಿ. ಸಾಮರ್ಥ್ಯದ ಜೇನು ಸಂಸ್ಕರಣಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲೇ ಪ್ರಥಮ ಬಾರಿಗೆ ಗಿರಿಜನ ಸಹಕಾರ ಸಂಘವೊಂದು ಜೇನು ಸಂಗ್ರಹಿಸಿ ಶುದ್ಧ ಸಂಸ್ಕರಿತ ಜೇನು ವಿತರಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಪೌಷ್ಟಿಕಾಂಶ ಹಾಗೂ ಔಷಧೀಯ ಗುಣ ಹೊಂದಿರುವ ಜೇನು ತುಪ್ಪವನ್ನು ಶಾಲಾ ಮಕ್ಕಳಿಗೂ ವಿತರಿಸುವುದರಿಂದ ಗಿರಿಜನರ ಆರ್ಥಿಕ  ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಅರಣ್ಯ ಹಕ್ಕು ಕಾಯ್ದೆಯಡಿ ಆದಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ಅರಣ್ಯ ಉತ್ಪನ್ನ ಮಾರಾಟಕ್ಕೆ ವ್ಯಾಟ್ ತೆರಿಗೆ ವಿನಾಯಿತಿ, ಗಿರಿಜನ ಪ್ರದೇಶಗಳ ಮೂಲಭೂತ ಸೌಲಭ್ಯ ಕಲ್ಪಿಸಲು ಗಮನ ಹರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಗುವುದೆಂದರು. ಅತಿವೃಷ್ಟಿ, ಕೊಳೆರೋಗದಿಂದ ಫಸಲು ಕಳೆದುಕೊಂಡ ಅಡಿಕೆ ಬೆಳೆಗಾರರಿಗೆ ಹೆಕ್ಟೇರಿಗೆ ರೂ. ೧೨ ಸಾವಿರ ಪರಿಹಾರ ವಿತರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ನೆರವಿಗೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು. ಹಳದಿ ಎಲೆ ರೋಗ ಸಂತ್ರಸ್ಥರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಕೆೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದೆಂದು ತಿಳಿಸಿದರು.

ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ನಾಗರಿಕತೆ ಪರಿಚಯವಿಲ್ಲದಿದ್ದರೂ ಗಿರಿಜನರು ಸತ್ಯವಂತರಾಗಿ ಬದುಕುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದಿರುವ ಗಿರಿಜನರಿಗೆ ಕೊಳೆರೊಗದ ಪರಿಹಾರ ವಿತರಿಸಬೇಕೆಂದರಲ್ಲದೆ, ಹಿಂದಿನ ಸರ್ಕಾರ ಕ್ಷೇತ್ರದಲ್ಲಿ ಆರಂಭಿಸಲು ಮಂಜೂರಾತಿ ನೀಡಿರುವ ಕೌಶಲ್ಯ ತರಬೇತಿ ಕೇಂದ್ರ, ಪಾಲಿಟೆಕ್ನಿಕ್ ಕಾಲೇಜು, ವಾಜಪೇಯಿ ವಸತಿಶಾಲೆ ಆರಂಭಿಸಲು ಕ್ರಮ ವಹಿಸುವಂತೆ ಸಂಸದರನ್ನು ಕೋರಿದರು.

ಲ್ಯಾಂಪ್ಸ್ ಮೈಸೂರು ಮಹಾ­ಮಂಡಳದ ಅಧ್ಯಕ್ಷ ಕೃಷ್ಣಪ್ಪ, ಲ್ಯಾಂಪ್ಸ್ ನಿರ್ದೇಶಕ ಮರಿಯಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ಲ್ಯಾಂಪ್ಸ್ ಅಧ್ಯಕ್ಷ ಡಿಎಫ್ಒ ಡಾ. ಶಂಕರ್, ತಾ.ಪಂ. ಅಧ್ಯಕ್ಷೆ ಪದ್ಮಾವತಿ ರಮೇಶ್ ಇದ್ದರು.

ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ಗಿರಿಜನ ಪ್ರತಿಭೆ ನ.ರಾ.ಪುರ ಸ.ಪ್ರ.ದ.ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಉಮೇಶ್ ಅವರನ್ನು ಸನ್ಮಾನಿಸಲಾಯಿತು.  ಕೆ.ವಿ. ಚಂದ್ರಶೇಖರ್ ಸ್ವಾಗತಿಸಿದರು. ಶೆಟ್ಟಿಕೊಪ್ಪ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.