
ಚಿಕ್ಕಮಗಳೂರು: ಹಿರೇಮಗಳೂರಿನ ಕೋದಂಡ ರಾಮಚಂದ್ರಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಸುತ್ತಮುತ್ತಲ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ಮತ್ತು ಮೈಸೂರಿನಿಂದಲೂ ಭಕ್ತಾದಿಗಳು ಬಂದಿದ್ದರು. ರಥೋತ್ಸವಕ್ಕೆ ಮೊದಲು ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ರಥ ಎಳೆಯಲು ಚಾಲನೆ ನೀಡಲಾಯಿತು. ಬಳಿಕ ಭಕ್ತರು ತೇರನ್ನು ಸಂಭ್ರಮದಿಂದ ಎಳೆದು, ಹರಕೆ ಸಲ್ಲಿಸಿದರು.
ನಾದಸ್ವರ ಮುಂದೆ ಸಾಗುತ್ತಿದ್ದಂತೆ ಭಕ್ತರು ರಥವನ್ನು ಎಳೆದೊಯ್ಯುತ್ತಿದ್ದರು. ರಥದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಲಾಯಿತು.
ರಥೋತ್ಸವಕ್ಕೆ ಮೊದಲು ಪ್ರತಿ ದಿನ ಶಯನೋತ್ಸವ ನಡೆಯಿತು. ಸೋಮವಾರ ರಾತ್ರಿ ಗರುಡೋತ್ಸವ ನಡೆಯಿತು. ಬೆಳಿಗ್ಗೆ ರಥವನ್ನು ಅರ್ಧಕ್ಕೆ ಎಳೆದು ನಿಲ್ಲಿಸಿದ್ದು, ಸಂಜೆ ರಥವನ್ನು ಪೂರ್ಣ ಎಳೆಯಲಾಯಿತು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ನಗರಸಭೆ ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ಎಚ್.ಡಿ.ತಮ್ಮಯ್ಯ, ಮುಖಂಡರಾದ ಕೆ.ಆರ್.ವಿಜಯನ್ ಹಾಜರಿದ್ದರು.
ರಾಜಸ್ವ ನಿರೀಕ್ಷಕ ಹೇಮಂತ್ ಕುಮಾರ್, ನಗರಸಭಾ ಆಯುಕ್ತ ನಾಗಭೂಷಣ್, ನಗರ ಮತ್ತು ಗ್ರಾಮಾಂತರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ವೈದೀಹಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.