ADVERTISEMENT

‘ಅಡಿಕೆ ಬೆಳೆ ನಿಷೇಧ ರೈತರಿಗೆ ಮರಣ ಶಾಸನ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:35 IST
Last Updated 24 ಡಿಸೆಂಬರ್ 2013, 6:35 IST

ಮೂಡಿಗೆರೆ: ಕೇಂದ್ರ ಸರ್ಕಾರವು ಸುಪ್ರಿಂ ಕೋರ್ಟಿಗೆ ಸಲ್ಲಿಸಿರುವ ಅಡಿಕೆ ಬೆಳೆ ನಿಷೇಧ ನಿಲುವು ಸರ್ಕಾರಗಳು ರೈತರಿಗೆ ನೀಡುತ್ತಿರುವ ಮರಣ ಶಾಸನವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎ. ಶೇಷಗಿರಿ ಕಳಸ ಆತಂಕ ವ್ಯಕ್ತ ಪಡಿಸಿದರು.

ತಾಲ್ಲೂಕಿನ ಹ್ಯಾಂಡ್‌ಪೋಸ್ಟ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ತಾಲ್ಲೂಕು ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ರೈತರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರಿದ್ದು, ಅಡಿಕೆ ಬೆಳೆಯೊಂದೇ ಕುಟುಂಬಕ್ಕೆ ಆಧಾರವಾಗಿದೆ. ಇದೀಗ ಅಡಿಕೆ ಬೆಳೆ ನಿಷೇಧ ಕ್ರಮವನ್ನು ಕೈಗೆತ್ತಿ ಕೊಂಡರೆ, ಇಡೀ ರೈತಾಪಿ ವರ್ಗವೇ ಬೀ ದಿಗೆ ಬೀಳುವ ಅಪಾಯವಿದೆ ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್‌ಕುಮಾರ್ ಮಾತನಾಡಿ, ರೈತರು ಬೆಳೆದ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ದೊರೆಯದಿರುವುದು ಎಷ್ಟೇ ಕಷ್ಟಪಟ್ಟು ದುಡಿದರೂ ಆರ್ಥಿಕ ವಾಗಿ ಸಬಲರಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು, ಜನಪ್ರತಿನಿಧಿಗಳು ಕೃಷಿಕ್ಷೇತ್ರವನ್ನು ಕಡೆಗಣಿಸದೇ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ದೊರೆಯುವಂತೆ ನಿಯಮಗಳನ್ನು ರೂಪಿಸಬೇಕು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಮುದಾ ಮಾತನಾಡಿ, ತಾಲ್ಲೂಕಿ ನಲ್ಲಿ ಉತ್ತಮ ಭತ್ತದ ಬೆಳೆಗಾರ ಪ್ರಶಸ್ತಿಗೆ ಆಹ್ವಾನಿಸಿದ್ದ ಅರ್ಜಿಗೆ 28 ರೈತರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಒಂದು ಮೂವರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಪ್ರಥಮ ಬಹುಮಾನವನ್ನು ಮುತ್ತಿಗೆ ಪುರದ ಅಣ್ಣಪ್ಪ, ದ್ವಿತೀಯ ಬಹುಮಾ ನವನ್ನು ತಮ್ಮಣ್ಣಗೌಡ, ತೃತೀಯ ಬಹುಮಾನ ವನ್ನು ಸೋಮೇಗೌಡರಿಗೆ ಬಹುಮಾನ ವಿತರಿಸಿದರು.

ತಾಲ್ಲೂಕಿನಲ್ಲಿ ಕಾಳು ಮೆಣಸು ಕೃಷಿಯಲ್ಲಿ ಸಾಧನೆಗೈದು ಅಂತರಾ ಷ್ಟ್ರೀಯ ಪ್ರಶಸ್ತಿ ಪಡೆದ ಕೆಂಜಿಗೆ ಕೇಶವ್ ಮತ್ತು ದಾರದಹಳ್ಳಿ ರಮೇಶ್‌ಗೌಡ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಡಾ.ಸುಕನ್ಯ, ಭರತ್‌, ಕೃಷಿಕ ಸಮಾಜದ ಕಾರ್ಯದರ್ಶಿ ಪಿ.ಕೆ. ನಾಗೇಶ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿ ಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.