ADVERTISEMENT

‘ಕಾಂಗ್ರೆಸ್‌ನಿಂದ ಹಿಂದೂ ಸಮಾಜ ತುಳಿಯುವ ಷಡ್ಯಂತ್ರ’

ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ ಆರೋಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 6:07 IST
Last Updated 16 ಡಿಸೆಂಬರ್ 2013, 6:07 IST

ಚಿಕ್ಕಮಗಳೂರು: ಹಿಂದೂ ಸಮಾಜವನ್ನು ತುಳಿಯುವ ಷಡ್ಯಂತ್ರವನ್ನು ಕಾಂಗ್ರೆಸ್‌ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ಮಾಡುತ್ತಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ ಆರೋಪಿಸಿದರು.

ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರದಂಗ ದಳ ನೇತೃತ್ವದಲ್ಲಿ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ ಅಂಗವಾಗಿ ನಡೆದ ಶೋಭಾಯಾತ್ರೆಯ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಮುಸ್ಲಿಮರನ್ನು ಓಲೈಸಲು ಮತ್ತು ಅವರ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ದೇಶದಲ್ಲಿ ಕರಾಳವಾದ ಕಾಯ್ದೆಯೊಂದನ್ನು ಜಾರಿಗೆ ತರಲು ಹೊರಟಿದೆ. ಸಂಸತ್‌ನಲ್ಲಿ ಪ್ರಸ್ತಾಪಿಸಲೂ ಯೋಗ್ಯವಲ್ಲದ ’ಕೋಮು ಹಿಂಸಾ ತಡೆ ಕಾಯ್ದೆ’ ಜಾರಿಗೆ ಬಂದರೆ ಬಹುಸಂಖ್ಯಾತರಾದ ಹಿಂದೂಗಳಿಗೆ ಈ ದೇಶದಲ್ಲಿ ರಕ್ಷಣೆ ಇಲ್ಲದಂತಾಗುತ್ತದೆ. ಈ ಕಾಯ್ದೆ ಜಾರಿಯಾಗಲು ಅವಕಾಶ ನೀಡಬಾರದು, ಹಿಂದೂ ಸಮಾಜ ಜಾಗೃತವಾಗಿ ರಾಷ್ಟ್ರದಾದ್ಯಂತ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಈ ಕಾಯ್ದೆ ಜಾರಿಗೆ ಬಂದರೆ ಮುಸ್ಲಿಂ ವ್ಯಕ್ತಿಯೊಬ್ಬ ತಮ್ಮ ಭಾವನೆಗಳಿಗೆ ನೋವಾಗಿದೆ ಎಂದು ಮೌಖಿಕ ದೂರು ನೀಡಿದರೆ ಸಾಕು ಬಹುಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬಹುದಾಗಿದೆ. ಇಂತಹ ಭಯಾನಕ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿದೆ. ದೇಶ ವಿಭಜನೆ­ಗೊಂಡು, ಸ್ವಾತಂತ್ರ್ಯ ಸಿಕ್ಕಿ 60 ವರ್ಷಗಳು ಕಳೆದು ಹೋಗಿವೆ. ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿ ಇಲ್ಲೇ ಉಳಿದ ಮುಸ್ಲಿಮರನ್ನು ಹಿಂದೂ ಸಮಾಜ ಸಹೋದರಂತೆ ನಡೆಸಿಕೊಂಡಿದೆ.

ದೇಶದಲ್ಲಿ ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಹಿಂದೂಗಳಿಗೆ ಗೌರವದಿಂದ ಬಿಟ್ಟುಕೊಟ್ಟಿದ್ದರೆ ಇನ್ನಷ್ಟು ಶಾಂತಿಸೌಹಾರ್ದ ನೆಲೆಸಿರುತ್ತಿತ್ತು. ಶೇ.80ರಷ್ಟು ಇರುವ ಹಿಂದೂಗಳು ತಿರುಗಿಬಿದ್ದರೆ ಪರಿಸ್ಥಿತಿ ಏನಾಗುತ್ತದೆ ಎನ್ನುವ ಅರಿವು ಇಲ್ಲದೆ, ಹಿಂದೂ ಸಮಾಜವನ್ನು ಹತ್ತಿಕ್ಕಲು ಕಾಂಗ್ರೆಸ್‌ ಹೊರಟಿದೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಒಳ್ಳೆಯ ಆಡಳಿತ ನೀಡುತ್ತಾರೆ ಎನ್ನುವ ನಿರೀಕ್ಷೆ ರಾಜ್ಯದ ಜನರಲ್ಲಿ ಇತ್ತು. ಆದರೆ, ಅವರು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಆಡಳಿತದಲ್ಲಿ ಎಡವಿದ್ದಾರೆ. ಮುಸ್ಲಿಮರ ಮತಗಳಿಂದಲೇ ಗೆದ್ದು ಬಂದಿದ್ದೇನೆ ಎನ್ನುವ ಭಾವನೆಯಿಂದ ಮುಸ್ಲಿಮರನ್ನು ಓಲೈಸಲು ಶಾದಿ ಭಾಗ್ಯ ಯೋಜನೆ ಜಾರಿಗೆ ತಂದು, ಹಿಂದೂ­ಗಳನ್ನು ಕೆರಳಿಸಿದ್ದಾರೆ. ಅವರ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ’ರಾಮ’ನ ಹೆಸರು ಸೇರಿಕೊಂಡಿದೆ. ಅವರಿಗೆ ಮುಸ್ಲಿಮರ ಓಟುಗಳೇ ಸಾಕೆಂದರೆ ಅವರ ಹೆಸರನ್ನು ’ಸಿದ್ದಿಕ್‌ ರೆಹ­ಮಾನ್‌’ ಎಂದು ಬದಲಿಸಿಕೊಳ್ಳಲಿ, ನಮ್ಮ ಅಭ್ಯಂತರವಿಲ್ಲ ಎಂದು ಲೇವಡಿ ಮಾಡಿದರು.

ದತ್ತ ಪೀಠ ಹಿಂದೂಗಳ ಪವಿತ್ರ ಕ್ಷೇತ್ರ. ಇದನ್ನು ಸಾವಿರಾರು ವರ್ಷಗಳ ದಾಖಲೆಗಳು ಹೇಳುತ್ತಿವೆ. ಆದರೆ, ಸಮಾಜವನ್ನು ದಿಕ್ಕುತಪ್ಪಿಸಲು ಹೊರಟ ಶಕ್ತಿಗಳು ಮತ್ತು ಅತಿಯಾದ ಜಾತ್ಯತೀತೆ ಪ್ರದಿಪಾದಿಸಲು ಹೊರಟವರು ದತ್ತಪೀಠವನ್ನು ಸೌಹಾರ್ದ ಕೇಂದ್ರವನ್ನಾಗಿ ಮಾಡುವ ಹುನ್ನಾರ ನಡೆಸಿದರು.

ದತ್ತ ಪೀಠದ ಮುಕ್ತಿಗಾಗಿ ವಿಶ್ವ­ಹಿಂದೂ ಪರಿಷತ್‌ ಮತ್ತು ಬಜರಂಗದಳ ನೇತೃತ್ವ­ದಲ್ಲಿ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ ನಡೆಸಿಕೊಂಡು ಬರಲಾಗುತ್ತಿದೆ. ವರ್ಷ­ದಿಂದ ವರ್ಷಕ್ಕೆ ದತ್ತ ಮಾಲಾ ಅಭಿಯಾನಕ್ಕೆ ಹೆಚ್ಚು ಜನರನ್ನು ಸೆಳೆಯುವಲ್ಲಿ ಸಂಘಟನೆ ಯಶಸ್ವಿ­ಯಾಗಿವೆ. ಪೀಠವನ್ನು ಮುಕ್ತಿಗೊಳಿಸುವ­ವರೆಗೂ ಹೋರಾಟ ನಿಲ್ಲದು ಎಂದರು.

ಪ್ರತಿಯೊಂದು ದೇಶವು ತನ್ನ ಉನ್ನತಿಗೆ ಮತ್ತು ಆಂತರಿಕ ಭದ್ರತೆಗೆ ಶ್ರಮಿಸುತ್ತದೆ. ಆದರೆ, ಜಗತ್ತಿನಲ್ಲಿ ಬಹುಸಂಖ್ಯಾತರಿಗೆ ಅನ್ಯಾಯವಾಗು­ತ್ತಿದ್ದರೆ ಅದು ಭಾರತದಲ್ಲಿ ಮಾತ್ರ. ದೇಶಕ್ಕೆ ಸಮರ್ಥ ನಾಯಕತ್ವದ ಅಗತ್ಯವಿದ್ದು, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈ ದೇಶವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎನ್ನುವ ನಂಬಿಕೆಯನ್ನು ಇಡೀ ಹಿಂದೂ ಸಮಾಜ  ಇಟ್ಟುಕೊಂಡಿದೆ ಎಂದರು.

ಶಂಕರದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಕುರುಬರಹಳ್ಳಿ ಮಠದ ಜಯಬಸವಾ­ನಂದ ಸ್ವಾಮೀಜಿ, ಗಂಗಾವತಿಯ ಮಾಧವಾ­ನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಎಚ್‌ಪಿ ಮುಖಂಡರಾದ ಅತ್ತಿಕಟ್ಟೆ ಜಗನ್ನಾಥ್‌, ಶ್ರೀಕಾಂತ ಪೈ ಇನ್ನಿತರರು ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.