ADVERTISEMENT

‘ಪ್ರೀತಿ, ವಾತ್ಸಲ್ಯದ ಗಣಿ ಅಸಗೋಡು ಸೀತಮ್ಮ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 8:50 IST
Last Updated 24 ಸೆಪ್ಟೆಂಬರ್ 2013, 8:50 IST

ಕೊಪ್ಪ: ಪ್ರೀತಿ, ವಾತ್ಸಲ್ಯ, ಆತಿಥ್ಯಕ್ಕೆ ಇನ್ನೊಂದು ಹೆಸರಾಗಿದ್ದ ಅಸಗೋಡು ಸೀತಮ್ಮ ಅವರು ಮಲೆನಾಡಿನ ಒಕ್ಕಲಿಗ ಸಮುದಾಯದ ದಿಟ್ಟ ಮಹಿಳೆಯಾಗಿ ಆದರ್ಶ ಜೀವನ ನಡೆಸಿದ್ದಾರೆಂದು ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಎಚ್.ಜಿ. ವೆಂಕಟೇಶ್ ತಿಳಿಸಿದರು.

ಅವರು ಮಂಗಳವಾರ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಅಸಗೋಡು ಸೀತಮ್ಮನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೃತರಿಗೆ ನುಡಿನಮನ ಸಲ್ಲಿಸಿದರು.

15ನೇ ವಯಸ್ಸಿನಲ್ಲಿ ಕೊಪ್ಪ ತಾಲ್ಲೂಕಿನ ಪ್ರತಿಷ್ಠಿತ ಅಸಗೋಡು ಕುಟುಂಬಕ್ಕೆ ವಾಟಿಗಾರು ಕುಟುಂಬ ದಿಂದ ಸೊಸೆಯಾಗಿ ಬಂದ ಸೀತಮ್ಮ 25ನೇ ವಯಸ್ಸಿನಲ್ಲಿ ಪತಿ ರಾಮಣ್ಣ ಗೌಡರನ್ನು ಕಳೆದುಕೊಂಡು ವೈಧವ್ಯ ಅನುಭವಿಸಿದರೂ, ತಮ್ಮ 5 ಮಂದಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಉತ್ತಮ ಬದುಕು ಕಲ್ಪಿಸಿದ್ದಲ್ಲದೆ ಸಮಾಜಮುಖಿಯಾಗಿ ಬೆಳೆಸಿ ಕುಟುಂಬದ ಘನತೆ ಎತ್ತಿಹಿಡಿದಿದ್ದಾರೆ. ಸರ್ವರನ್ನೂ ಪ್ರೀತಿ, ವಾತ್ಸಲ್ಯದಿಂದ ಕಾಣುತ್ತಿದ್ದ ಅವರ ಕೈತುತ್ತು ಉಂಡ ನೆನಪುಗಳನ್ನು ಮೆಲುಕು ಹಾಕಿದರು.

ಅಮ್ಮಡಿ ನಾಗಪ್ಪ ನಾಯ್ಕರು ಮಾತನಾಡಿ ತಾಲ್ಲೂಕಿನ ರಾಜಕೀಯ ರಂಗದಲ್ಲೂ ಅಸಗೋಡು ಕುಟುಂಬ ಗಮನಾರ್ಹ ಕೊಡುಗೆ ನೀಡಿದೆ ಎಂದರು.

ಮೃತ ಸೀತಮ್ಮನವರ ನೆನಪಿನಲ್ಲಿ ಒಕ್ಕಲಿಗ ಸಮುದಾಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅಸಗೋಡು ಕುಟುಂಬದಿಂದ  1 ಲಕ್ಷ ರೂ. ದತ್ತಿನಿಧಿ ನೀಡಲಾಯಿತು. ಸೀತಮ್ಮ ನವರ ಮಕ್ಕಳಾದ ಎ.ಆರ್. ಶಿವ ಪ್ರಕಾಶ್, ಎ.ಆರ್. ಜಯಪ್ರಕಾಶ್, ಎ.ಆರ್. ಆರುಂಧತಿ, ಎ.ಆರ್. ರೇವತಿ, ಎ.ಆರ್. ರೇಣುಕ ಸೇರಿದಂತೆ ಅಸಗೋಡು ಹಾಗೂ ವಾಟಿಗಾರು ಕುಟುಂಬದ ಬಂಧುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಗುಂಡಪ್ಪ ಜೋಗಿ ಸಂಗಡಿಗರು ಜೋಗಿಪದ, ತತ್ವಪದ, ಜವರಾಯನ ಹಾಡುಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.