ಚಿಕ್ಕಮಗಳೂರು: ಆಲ್ದೂರು ಪಟ್ಟಣದಲ್ಲಿ ಕಳೆದ 23 ವರ್ಷಗಳಿಂದ ರಾರಾಜಿಸುತ್ತಿದ್ದ ಭಗವಾಧ್ವಜ ಕಟ್ಟೆಯನ್ನು ಕಾಂಗ್ರೆಸಿಗರ ಪ್ರಚೋದನೆಯಿಂದ ಜಿಲ್ಲಾಡಳಿತ ತೆರವುಗೊಳಿಸಿ ಕೋಮು ಭಾವನೆ ಕೆಳಿಸುವ ಕೆಲಸ ಮಾಡಿದೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧ್ವಜಕಟ್ಟೆ ತೆರವು ಪ್ರಕರಣ ಖಂಡಿಸಿರುವ ರವಿ, ಲೋಕಸಭಾ ಚುನಾವಣೆ ಘೋಷಣೆಯಾದ ಮೇಲೆ ಭಗವಾಧ್ವಜ ಕಟ್ಟೆ ತೆರವು ಮಾಡುವಂತಹ ದುಸ್ಸಾಹಸಕ್ಕೆ ಕೈ ಹಾಕಿರುವುದು ಒಂದು ವರ್ಗ ಓಲೈಸಿ ರಾಜಕೀಯ ತುಷ್ಟೀಕರಣ ನೀತಿ ಅನುಸರಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ಭಾವನೆ ಕೆರಳಿಸುವುದು, ಪ್ರತಿಭಟಿಸಲು ಮುಂದಾದವರನ್ನು ಬಂಧಿಸಿ ಜೈಲಿಗೆ ಕಳಿಸುವ ರಹಸ್ಯ ಕಾರ್ಯ ಸೂಚಿ ಇಟ್ಟುಕೊಂಡು ಕಾಂಗ್ರೆಸ್ ಕಾರ್ಯ ನಿರ್ವಹಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಏಕಪಕ್ಷೀಯವಾಗಿ ಸಹಾಯ ಮಾಡುವ ದೃಷ್ಟಿಯಿಂದ ಚುನಾವಣೆ ಘೋಷಣೆ ನಂತರ ಸಂದರ್ಭವನ್ನು ಜಿಲ್ಲಾಡಳಿತ ಆಯ್ಕೆ ಮಾಡಿಕೊಂಡಿದೆ ಎಂದು ದೂರಿದಾದ್ದಾರೆ.
ಆಲ್ದೂರಿನಲ್ಲಿ 300ಜನ ಸಿಬ್ಬಂದಿ ಬಳಸಿ ಧ್ವಜಕಟ್ಟೆ ಕಿತ್ತುಹಾಕಿರುವುದು ಪೌರುಷವೋ ಅಥವಾ ರಾಜಕೀಯ ಹುನ್ನಾರವೋ ಉತ್ತರಿಸಬೇಕು. ಜಿಲ್ಲಾಧಿಕಾರಿ ಕಾಂಗ್ರೆಸಿಗರಂತೆ ವರ್ತಿಸಿದ್ದು, ಇಂತಹವರಿಂದ ನಿಷ್ಪಕ್ಷಪಾತ ಚುನಾವಣೆ ನಡೆಯುವುದು ಅನುಮಾನ ಎಂದು ಕಿಡಿಕಾರಿದ್ದಾರೆ. ತೆರವುಗೊಳಿಸಿರುವ ಭಗವಾಧ್ವಜವನ್ನು ಗೌರವಯುತವಾಗಿ ಮೊದಲಿನ ಸ್ಥಳದಲ್ಲೇ ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಶಾಂತಿ, ನೆಮ್ಮದಿ ಕದಡಲು ಜಿಲ್ಲಾಡಳಿತವೇ ನೇರ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.