ADVERTISEMENT

‘ಶಿಕ್ಷಣದಷ್ಟೆ ಕ್ರೀಡೆಗೂ ಮಹತ್ವ ನೀಡಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:16 IST
Last Updated 20 ಸೆಪ್ಟೆಂಬರ್ 2013, 9:16 IST

ಬೀರೂರು: ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬೇಕೆಂದರೆ ಬೌದ್ಧಿಕ ಬೆಳವಣಿಗೆಯ ಶಿಕ್ಷಣಕ್ಕೆ ನೀಡು­ವಷ್ಟೇ ಮಹತ್ವವನ್ನು ಕ್ರೀಡೆ­ಗಳಿಗೂ ನೀಡಬೇಕು ಎಂದು ಜಿಲ್ಲಾಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಕರೆ ನೀಡಿದರು.

ಪಟ್ಟಣದ ಬಸಪ್ಪ ಬಡಾವಣೆಯ­ಲ್ಲಿರುವ ಲಲಿತಸುಧಾ ವಿದ್ಯಾಲಯದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು  ಬೀರೂರು ಶೈಕ್ಷಣಿಕ ವಲಯದ ಆಶ್ರಯ­ದಲ್ಲಿ ನಡೆದ ಹಿರಿಯ ಪ್ರಾಥ­ಮಿಕ ಶಾಲೆಗಳ  ಜಿಲ್ಲಾಮಟ್ಟದ ಗುಂಪು ಆಟಗಳ ಕ್ರೀಡಾಕೂಟವನ್ನು ಉದ್ಘಾ­ಟಿಸಿ ಅವರು ಮಾತನಾಡಿದರು.

ಭಾರತ ಮಾನವ ಮತ್ತು ಪ್ರಾಕೃತಿಕ ಸಂಪನ್ಮೂಲಗಳಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ, ಬೌದ್ಧಿಕ ರಂಗ­ದಲ್ಲಿ ಭಾರತೀಯರು ಅಪ್ರತಿಮರು. ಆದರೆ ಕ್ರೀಡಾರಂಗದಲ್ಲಿ ದೇಶದ ಸಾಧನೆ ಶೂನ್ಯವೆಂದೇ ಹೇಳಿದರೆ ತಪ್ಪಾಗಲಾರದು.

ಶಾಲಾ­ಮಟ್ಟ­ದಿಂದಲೇ ಮಕ್ಕಳ ಪ್ರತಿಭೆಗೆ ಸೂಕ್ತ­ವೇದಿಕೆ ಸೃಷ್ಟಿಯಾಗಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇದ್ದರೆ ಉತ್ತಮ ಸಾಧನೆ ಸಾಧ್ಯ, ಮಕ್ಕಳು ಮಾನಸಿಕ, ಬೌದ್ಧಿಕ ಮತ್ತು ದೈಹಿಕ­ವಾಗಿ ಸಬಲರಾದರೆ ಸಂಪೂರ್ಣ ಶಿಕ್ಷಣ ಪಡೆದಂತೆ. ಸಿಗುವ ಸುವರ್ಣ ಅವಕಾಶವನ್ನು ಸದುಪಯೋಗ­ಪಡಿಸಿ­ಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು.

ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದ ಜಿ.ಪಂ ಉಪಾಧ್ಯಕ್ಷೆ ಸುಜಾತಾ ಕ್ರೀಡೆಯಲ್ಲಿ ಸೋಲು–ಗೆಲುವು ಸಾಮಾನ್ಯ, ಚೆನ್ನಾಗಿ ಆಟ­ವಾಡಿ ಶಾಲೆಗೆ ಕೀರ್ತಿ ತರುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರೆ, ಜಿ.ಪಂ ಸಿಇಒ ಬಿ.ಜಿ.ವಿಠಲ್‌ ಮಾತನಾಡಿ ಆಟ ಪಾಠ ಮತ್ತು ಊಟ ಮೂರು ಅಂಶಕ್ಕೂ ಮಕ್ಕಳು ಒತ್ತು ನೀಡಬೇಕು ಎಂದು ತಿಳಿಸಿದರು. ಲಿಂಗದಹಳ್ಳಿ ಕ್ಷೇತ್ರ ಜಿ.ಪಂ. ಸದಸ್ಯೆ ಹೇಮಾವತಿ ಕೃಷ್ಣಪ್ಪ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಸ್ವತಿಪುರ ಜಿ.ಪಂ ಸದಸ್ಯ ಬಿ.ಪಿ.­ನಾಗರಾಜ್‌, ‘ನಮ್ಮ ಬದುಕಿನಲ್ಲಿ ಕ್ರೀಡೆ ಮತ್ತು ಓದು ಎರಡೂ ಮುಖ್ಯ­ವಾಗಿದ್ದು ಮನಃಪರಿವರ್ತನೆ ಮಾಡುವ ಮನೋಭಾವವಿರಲಿ’ ಎಂದರು.

ಬೀರೂರು ವಲಯ ಕ್ಷೇತ್ರಶಿಕ್ಷಣಾಧಿ­ಕಾರಿ ಮೋಹನ್‌­ಕುಮಾರ್‌, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಲಕ್ಷ್ಮಣ್‌, ಬಿಆರ್‌ಸಿಗಳಾದ ಮಹೇಂದ್ರ, ಪ್ರಕಾಶ್‌, ತಾಲ್ಲೂಕು ದೈಹಿಕ ಶಿಕ್ಷಣ ಪರಿ­ವೀಕ್ಷಕ ಮಲ್ಲಪ್ಪ, ಪುರಸಭೆ ಸದಸ್ಯ­ರಾದ ದೇವರಾಜ್‌, ಸವಿತಾ­­ರಮೇಶ್‌, ಶಾಲಾ ಸಮಿತಿ ಉಪಾಧ್ಯಕ್ಷೆ ಶ್ಯಾಮಲಾ, ಮುಖ್ಯಶಿಕ್ಷಕಿ ವಿಶಾಲಾಕ್ಷಿ, ಶಿಕ್ಷಣ ಇಲಾಖೆಯ ಸಿಬ್ಬಂದಿ, ಜಿಲ್ಲೆಯ ಎಲ್ಲ ಶೈಕ್ಷಣಿಕ ವಲಯಗಳ ಮಕ್ಕಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.