ADVERTISEMENT

ಕಾಫಿನಾಡಿನಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ

ಬಿ.ಜೆ.ಧನ್ಯಪ್ರಸಾದ್
Published 28 ಡಿಸೆಂಬರ್ 2019, 19:45 IST
Last Updated 28 ಡಿಸೆಂಬರ್ 2019, 19:45 IST
ಆತ್ಮಹತ್ಯೆ
ಆತ್ಮಹತ್ಯೆ   

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿವೆ. ಮೂರು ವರ್ಷಗಳಲ್ಲಿ 1,062 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ, ಈ ಪೈಕಿ ಪುರುಷರು ಹೆಚ್ಚು ಇದ್ದಾರೆ.

ಸಾಲಬಾಧೆ, ಕೌಟುಂಬಿಕ ಕಲಹ (ಪತಿ–ಪತ್ನಿ, ಅತ್ತೆ–ಸೊಸೆ ಜಗಳ) ಅಕ್ರಮ ಸಂಬಂಧ, ಪ್ರೇಮ ವೈಫಲ್ಯ, ಕಾಯಿಲೆ–ಹತಾಶೆ, ಪರೀಕ್ಷೆಯಲ್ಲಿ ಅನುತ್ತೀರ್ಣ ಮೊದಲಾದ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಆತ್ಯಹತ್ಯೆಗಳು ಹೆಚ್ಚಳವಾಗಿರುವುದು ಏರಿಕೆಯಾಗಿರುವುದು ಆತಂಕಕ್ಕೆ ಎಡೆಮಾಡಿದೆ.

ಮೂರು ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾದ 1,062 ಮಂದಿ ಪೈಕಿ ಪುರುಷರು– 794 ಹಾಗೂ ಮಹಿಳೆಯರು 268 ಇದ್ದಾರೆ. 20 ವರ್ಷದೊಳಗಿನ 60, 21ರಿಂದ 35 ವರ್ಷ ವಯೋಮಾನದ 332, 36ರಿಂದ 50 ವರ್ಷ ವಯೋಮಾನದ 378 ಹಾಗೂ 50 ವರ್ಷ ಮೇಲ್ಪಟ್ಟ 292 ಮಂದಿ ಇದ್ದಾರೆ.

ADVERTISEMENT

ರೈತರ ಆತ್ಮಹತ್ಯೆ ಕಡಿಮೆಯಾಗಿದೆ. ಕೆಲ ತಿಂಗಳ ಹಿಂದೆ ಕೌಟುಂಬಿಕ ಕಲಹದಿಂದ ಟ್ರಾಫಿಕ್‌ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅತಿವೃಷ್ಟಿಯಿಂದ ತೋಟ ನಾಶವಾಗಿದ್ದರಿಂದ ರೈತರೊಬ್ಬರು ಗುಂಡು ಹಾರಿಸಿ ಪ್ರಾಣಬಿಟ್ಟಿದ್ದರು. ಈ ವರ್ಷ ಡಿಸೆಂಬರ್‌ ತಿಂಗಳಲ್ಲಿ ಈವರೆಗೆ ಜಿಲ್ಲೆಯಲ್ಲಿ ಎಂಟಕ್ಕೂ ಹೆಚ್ಚು ಆತ್ಮಹತ್ಯೆಗಳು ವರದಿಯಾಗಿವೆ.

‘ಆತ್ಮಹತ್ಯೆಗೆ ಯತ್ನಿಸುವವರಲ್ಲಿ ಮಹಿಳೆಯರು ಹೆಚ್ಚು, ಅದರಲ್ಲಿ ‘ಸಫಲ’ರಾಗುವವರು ಬಹಳ ಕಡಿಮೆ. ಆತ್ಯಹತ್ಯೆಗೆ ಯತ್ನಿಸಿ ಸಫಲವಾಗುವವರಲ್ಲಿ ಪುರುಷರು ಜಾಸ್ತಿ. ವಿಷ ಸೇವನೆ, ನೇಣಿಗೆ ಶರಣಾಗುವ ಪ್ರಕರಣಗಳು ಹೆಚ್ಚು. ಜಾಸ್ತಿ, ಸಾಲ, ಗಂಡ–ಹೆಂಡತಿ, ಅತ್ತೆ–ಸೊಸೆ ಜಗಳದ ಕೇಸುಗಳೇ ಹೆಚ್ಚು’ ಎಂದು ಅರಳಗುಪ್ಪೆ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮಸ್ಯೆಗಳಿಗೆ ಸಾವು ಪರಿಹಾರವಲ್ಲ. ‘ಈಸಬೇಕು ಇದ್ದು ಜಯಿಸಬೇಕು’ ದಾಸರವಾಣಿಯನ್ನು ಸದಾ ಸ್ಮರಿಸಬೇಕು. ಆಪತ್ತು–ಸವಾಲುಗಳನ್ನು ಎದುರಿಸುವ ಧೈರ್ಯ ತಂದುಕೊಳ್ಳಬೇಕು. ಕಷ್ಟಗಳು ಎದುರಾದಾಗ ಎದೆಗುಂದಬಾರದು’ ಎಂದು ರೈತ ಚಂದ್ರೇಗೌಡ ಹೇಳುತ್ತಾರೆ.

***

ಜಿಲ್ಲೆಯಲ್ಲಿ ವರ್ಷಪೂರ್ತಿ ಪ್ರವಾಸಿಗರು ಗಿಜಿಗುಡುತ್ತಾರೆ. ಹೊರ ಜಿಲ್ಲೆಗಳಿಂದ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಇವೆ. ಸಾಲ ತೀರಿಸಲಾಗದೆ ಆತ್ಯಹತ್ಯೆ ಮಾಡಿಕೊಂಡವರೇ ಹೆಚ್ಚು.

–ಹರೀಶ್‌ಪಾಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.