ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 2024–25ನೇ ಸಾಲಿನಲ್ಲಿ ರಾಜ್ಯದ 160 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್ ತಿಳಿಸಿದ್ದಾರೆ.
ಇದುವರೆಗೆ ಒಟ್ಟು 889 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಧರ್ಮಸ್ಥಳದಿಂದ ₹60.05 ಕೋಟಿ ವಿನಿಯೋಗಿಸಲಾಗಿದೆ. ಇದರಿಂದ 4.05 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿವೆ. 2.58 ಲಕ್ಷ ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗಿದೆ. 530 ಕೋಟಿ ಗ್ಯಾಲನ್‌ನಷ್ಟು ನೀರು ಕೆರೆಗಳಲ್ಲಿ ಸಂಗ್ರಹವಾಗಿದೆ. ಸದ್ಯದಲ್ಲೇ ಪುನರುಜ್ಜೀವನಗೊಂಡ ಕೆರೆಗಳ ಸಂಖ್ಯೆ 1 ಸಾವಿರ ದಾಟಲಿದೆ ಎಂದು ಅವರು ಹೇಳಿದ್ದಾರೆ.
ಕೆರೆಗಳ ಪುನರುಜ್ಜೀವನಕ್ಕಾಗಿ 1,760 ಕೃಷಿಕರನ್ನು ಒಳಗೊಂಡ 160 ಕೆರೆ ಸಮಿತಿಗಳನ್ನು ರಚಿಸಲಾಗಿದೆ. 160 ನೋಡಲ್ ಅಧಿಕಾರಿಗಳು ಹಾಗೂ 7 ಮಂದಿ ಎಂಜಿನಿಯರ್‌ಗಳು ಕಾರ್ಯನಿರ್ವಹಿಸಿದ್ದಾರೆ. 12.50 ಲಕ್ಷ ಲೋಡ್‌ನಷ್ಟು ಕೆರೆಯ ಹೂಳನ್ನು ರೈತರು ತಮ್ಮ ಜಮೀನಿಗೆ ಬಳಸಿಕೊಂಡಿದ್ದಾರೆ. ಪುನರುಜ್ಜೀವನಗೊಂಡ ಕೆರೆಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕೆರೆ ಸಮಿತಿಗೆ ನಿರ್ವಹಣೆಗಾಗಿ ಹಸ್ತಾಂತರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವನ್ಯಜೀವಿಗಳಿಗಾಗಿ ಕೆರೆ ನಿರ್ಮಾಣ: ಶಿವಮೊಗ್ಗದ ತಾವರೆಕೆರೆ ಹುಲಿ ಮತ್ತು ಸಿಂಹಧಾಮದಲ್ಲಿ 10 ಕೆರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಕೆರೆಯನ್ನು ವನ್ಯಜೀವಿಗಳಿಗಾಗಿ ಪುನಶ್ಚೇತನಗೊಳಿಸಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ 2016ರಿಂದ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯ ನಡೆಯುತ್ತಿದೆ. ಕೆರೆಗಳಲ್ಲಿ ಹೂಳು ತುಂಬಿ ಮತ್ತೆ ಕೆರೆಗಳು ಹಾಳಾಗದಂತೆ ರಕ್ಷಿಸಿಕೊಳ್ಳಬೇಕು. ಜಲಮೂಲ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಕಾರವೂ ಶ್ಲಾಘನೀಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.