ADVERTISEMENT

₹2.5 ಕೋಟಿ ಹಣ ಬಿಡುಗಡೆ

ಅಕ್ಕನಾಗಲಾಂಬಿಕೆ ಗದ್ದುಗೆ ಜೀರ್ಣೋದ್ಧಾರ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 6:42 IST
Last Updated 5 ಅಕ್ಟೋಬರ್ 2017, 6:42 IST

ತರೀಕೆರೆ: ಅಕ್ಕನಾಗಲಾಂಬಿಕೆಯ ಗದ್ದುಗೆ ಶರಣರ ಆಧ್ಯಾತ್ಮಿಕ ಸ್ಥಳ.ಗದ್ದುಗೆಯ ಜೀರ್ಣೋದ್ಧಾರ ಕೆಲಸ ಯಾವುದೇ ಲೋಪವಿಲ್ಲದಂತೆ ನಿರ್ವಹಿಸಿ ಎಂದು ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮಿಗಳು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಅಕ್ಕನಾಗಲಾಂಬಿಕೆ ಗದ್ದುಗೆಯಲ್ಲಿ ಬುಧವಾರ ಸರ್ಕಾರ ಗದ್ದುಗೆ ಜೀರ್ಣೋದ್ಧಾರಕ್ಕೆ ಬಿಡುಗಡೆ ಮಾಡಿರುವ ₹2.5 ಕೋಟಿ ಕೋಟಿ ಕಾಮಗಾರಿ ಪ್ರಾರಂಭಿಸುವ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಗದ್ದುಗೆಗೆ ಮೀಸಲಿರುವ ಜಾಗ ದಲ್ಲಿ ಒಂದು ಸಾವಿರ ಜನರು ಕುಳಿತು ಕೊಳ್ಳುವಂತಹ ಸಮುದಾಯ ಭವನ, ವಿಶಾಲವಾದ ದಾಸೋಹ ಭವನ, ಗದ್ದುಗೆಗೆ ಬರುವ ಯಾತ್ರಾ ರ್ಥಿಗಳು ಉಳಿಯಲು ಪ್ರತ್ಯೇಕ ಯಾತ್ರಿ ನಿವಾಸ, ಶೌಚಾಲಯ ಹಾಗೂ ಗ್ರಂಥಾಲಯಗಳನ್ನು ನಿರ್ಮಿಸಬೇ ಕಾಗಿದೆ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಯಾತ್ರಿ ನಿವಾಸಕ್ಕೆ ಪ್ರತ್ಯೇಕವಾಗಿ ₹ 50 ಲಕ್ಷ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ADVERTISEMENT

ಒಂದು ವರ್ಷದಿಂದ ಮುಖ್ಯಮಂತ್ರಿ  ಅವರ ಮೇಲೆ ಒತ್ತಡ ತಂದು ಕಾರ್ಯ ಸಾಧಿಸಲಾಗಿದ್ದು, ಸ್ಥಳೀಯ ಶಾಸಕ ಜಿ.ಎಚ್.ಶ್ರೀನಿವಾಸ್, ಹೊಸದುರ್ಗದ ಶಾಸಕ ಬಿ.ಜಿ.ಗೋವಿಂದಪ್ಪ, ಚಿತ್ರ ದುರ್ಗದ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಇವರುಗಳ ಶ್ರಮದಿಂದ ಯಶಸ್ಸು ಸಿಕ್ಕಿದೆ ಎಂದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಅಕ್ಕ ನಾಗಲಾಂಬಿಕೆ ಗದ್ದುಗೆ ಪ್ರೇಕ್ಷಣಿಯ ಸ್ಥಳವಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಅಗತ್ಯ ಬಿದ್ದರೆ ಸರ್ಕಾರದಿಂದ ಇನ್ನಷ್ಟು ಹಣ ದೊರಕಿಸಲಾಗುವುದು. ಅಕ್ಕನಾಗಲಾಂಬಿಕೆ ಕ್ಷೇತ್ರಾಭಿವೃದ್ದಿ ಸಮಿತಿ ಹೆಸರಿಗೆ ತುರ್ತಾಗಿ ಅನ್ಯ ಕ್ರಾಂತ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ನನೆಗುದಿಗೆ ಬಿದ್ದಿದ್ದ ಗದ್ದುಗೆ ಜೀರ್ಣೋದ್ಧಾರ ಕಾರ್ಯಕ್ರಮವು ಸ್ವಾಮೀಜಿ ಅವರ ನೇತೃತ್ವದಲ್ಲಿ ಶೀಘ್ರದಲ್ಲಿ ಮುಗಿಯಲಿದೆ. ಮುಖ್ಯಮಂತ್ರಿ ಹಾಗೂ ಮುಖಂಡರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಪುರಸಭೆ ಸದಸ್ಯ ಟಿ.ಎಸ್.ಧರ್ಮರಾಜು, ಎ.ಸಿ. ಚಂದ್ರಪ್ಪ, ಕೆ.ಆರ್.ದೃವಕುಮಾರ್, ದೋರನಾಳು ಪರಮೇಶ್, ಕೆ.ಆರ್.ಆನಂದಪ್ಪ ಇದ್ದರು.

ಸಚಿವರಿಗೆ ಕರೆ: ಸರ್ಕಾರ ಅನುದಾನ ನೀಡುವ ಬಗ್ಗೆಗಿನ ನಡಾವಳಿಯಲ್ಲಿ ಗದ್ದುಗೆಯ ನಿವೇಶನವನ್ನು ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಹೆಸರಿನಲ್ಲಿ ಜಂಟಿ ನೋಂದಣಿ ಮಾಡುವಂತೆ ನಿರ್ದೆಶಿಸಲಾಗಿರುವ ಬಗ್ಗೆ ಶ್ರೀಗಳು ಹಾಗು ಸಮಿತಿ ಅಧ್ಯಕ್ಷರಾಗಿರುವ ಮಾಜಿ ಶಾಸಕ ಡಿ.ಎಸ್.ಸುರೇಶ್ ಅಪಸ್ವರ ಎತ್ತಿದರು. ಸರ್ಕಾರದ ನಿರ್ಧಾರ ಸ್ವಾಗತಾರ್ಹವಲ್ಲ ಇದಕ್ಕೆ ವಿರೋಧವಿದೆ ಎಂದು ಸಚಿವ ಎಚ್.ಆಂಜನೇಯರಿಗೆ ದೂರವಾಣಿ ಮೂಲಕ ಆಕ್ಷೇಪಿಸಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಸರ್ಕಾರದ ನಿರ್ದೆಶನದಂತೆ ಕಾಮಗಾರಿ ನಡೆಯಲಿರುವ ಕಾರಣ ನೊಂದಣಿ ಬೇಕಾಗುತ್ತದೆ. ಸರ್ಕಾರಕ್ಕೆ ಮೂಗು ತೂರಿಸುವ ಅನ್ಯ ಉದ್ದೇಶವಿಲ್ಲ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.