ADVERTISEMENT

ಅಮ್ಮನಕೆರೆಯಲ್ಲಿ ಪಕ್ಷಿಗಳ ಕಲರವ

ಡಿ.ಜಿ.ಮಲ್ಲಿಕಾರ್ಜುನ
Published 5 ಜನವರಿ 2018, 9:22 IST
Last Updated 5 ಜನವರಿ 2018, 9:22 IST
ಆಹಾರ ಹುಡುಕಾಟದ ಹಾರಾಟದಲ್ಲಿ ಬಾಯ್ಕಳಕ (ಓಪನ್‌ಬಿಲ್ಡ್ ಸ್ಟಾರ್ಕ್)
ಆಹಾರ ಹುಡುಕಾಟದ ಹಾರಾಟದಲ್ಲಿ ಬಾಯ್ಕಳಕ (ಓಪನ್‌ಬಿಲ್ಡ್ ಸ್ಟಾರ್ಕ್)   

ಶಿಡ್ಲಘಟ್ಟ: ಪ್ರಕೃತಿ ಪ್ರೇಮಿಗಳು ಮತ್ತು ಪಕ್ಷಿ ವೀಕ್ಷಕರು ಜನವರಿ 5ರಂದು ದೇಶದಾದ್ಯಂತ ರಾಷ್ಟ್ರೀಯ ಪಕ್ಷಿ ದಿನ (ರಾಷ್ಟ್ರೀಯ ಬರ್ಡ್ ಡೇ) ಆಚರಿಸಲಾಗುತ್ತಿದೆ. ಪಕ್ಷಿ ದಿನವನ್ನು ಆಚರಿಸಲು ತಾಲ್ಲೂಕಿನ ನಿಸರ್ಗಪ್ರಿಯರಿಗೂ ಸಕಾರಣ ವಿದೆ. ಕೆರೆಗಳಲ್ಲಿ ನೀರಿರುವುದರಿಂದ ನೀರು ಹಕ್ಕಿಗಳ ಆಗಮನವಾಗಿದೆ. ಪಕ್ಷಿಗಳ ಕುರಿತಾದ ಸಂರಕ್ಷಣೆ, ವೀಕ್ಷಣೆ, ಅಧ್ಯಯನ, ಜ್ಞಾನಾರ್ಜನೆ ಸೇರಿದಂತೆ ಹಕ್ಕಿಗಳ ಉಳಿವಿನ ಅಗತ್ಯತೆಗಳ ಬಗ್ಗೆ ಅರಿವು ಮೂಡಿಸಲು ಈ ದಿನ ಒಂದು ನೆಪವಾಗಲಿದೆ.

ರಂಗನತಿಟ್ಟು, ಕೊಕ್ಕರೆ ಬೆಳ್ಳೂರಿನಂತಹ ಪಕ್ಷಿಧಾಮಗಳಲ್ಲಿ ಚಳಿಗಾಲದಲ್ಲಿ ಕಾಣುವ ಹಲವಾರು ಹಕ್ಕಿಗಳು ನಗರದ ಹೊರವಲಯದ ಅಮ್ಮನಕೆರೆಗೆ ಬಂದಿವೆ. ಬಾಯ್ಕಳಕ ಅಥವಾ ಓಪನ್‌ಬಿಲ್ಡ್ ಸ್ಟಾರ್ಕ್ ಹಕ್ಕಿಗಳು, ಗೋದ್ಬಾದ ಅಥವಾ ವೂಲಿ ನೆಕ್ಡ್ ಸ್ಟಾರ್ಕ್, ಬೆಳ್ಳಕ್ಕಿಗಳು, ಕೊಳಬಕಗಳು, ಫಲಕಮಣಿ ಎಂಬ ಹೆಸರಿನ ಕಾಮನ್‌ ಕೂಟ್‌ ಬಾತುಗಳು, ಮೆಟ್ಟುಗೋಲು ಹಕ್ಕಿಗಳು ಇಲ್ಲಿ ವಾಸ್ತವ್ಯ ಹೂಡಿವೆ.

ಕೆಲ ಹಕ್ಕಿಗಳು ಗುಂಪು ಗುಂಪಾಗಿ ಕುಳಿತು ಆಹಾರದ ಅನ್ವೇಷಣೆಯಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ. ಹತ್ತಿರ ಯಾವುದಾದರೂ ಪ್ರಾಣಿಯೋ, ಮನುಷ್ಯರೋ ಸುಳಿದರೆ ಬರ‍್ರನೆ ಹಾರುತ್ತಾ ಗಾಳಿಯಲ್ಲಿ ಸುತ್ತಾಡಿ ಕೆರೆಯಲ್ಲಿನ ಸುರಕ್ಷಿತವಾದ ನೀರಿನ ಸೆಲೆಯತ್ತ ಸಾಗಿ ಕುಳಿತುಕೊಳ್ಳುತ್ತವೆ.

ADVERTISEMENT

ಏಷ್ಯಾ ಖಂಡದ ಪಾಕಿಸ್ತಾನ, ಬರ್ಮಾ, ಬಾಂಗ್ಲಾದೇಶ, ಥಾಯ್ಲೆಂಡ್‌ ಮತ್ತಿತರ ದೇಶಗಳಿಂದ ಬಂದಿರುವ ಕೆಲವು ಹಕ್ಕಿಗಳು ಸೂಕ್ತ ಆಹಾರ ಮತ್ತು ಸುರಕ್ಷತೆಯಿರುವ ಸ್ಥಳಗಳಲ್ಲಿ, ಮರಗಳ ಮೇಲೆ ಗುಂಪಿನಲ್ಲಿ ಗೂಡು ಕಟ್ಟಿಕೊಂಡು ಮರಿ ಮಾಡುತ್ತಿವೆ.

ಬಾಯ್ಕಳಕ ಅಥವಾ ಓಪನ್‌ಬಿಲ್ಡ್ ಸ್ಟಾರ್ಕ್ ಹಕ್ಕಿಗಳು ಎರಡು ಅಡಿಯಷ್ಟು ಎತ್ತರ ಇವೆ. ಅಗಲವಾದ ರೆಕ್ಕೆಗಳನ್ನು ಹೊಂದಿರುವ ಈ ಹಕ್ಕಿಗಳು ಬೂದಿ ಮಿಶ್ರಿತ ಬಿಳಿ ಬಣ್ಣ ಹೊಂದಿವೆ. ರೆಕ್ಕೆಗಳಿಗೆ ಕಪ್ಪು ಬಣ್ಣವಿದೆ. ಕೊಕ್ಕು ಒಂದನ್ನೊಂದು ಸೇರದೆ ನಡುವೆ ಜಾಗ ಇರುವುದರಿಂದ ಬಾಯ್ಕಳಕ ಎನ್ನುತ್ತಾರೆ. ಚಿಪ್ಪನ್ನು ಹೊಂದಿರುವ ಶಂಖದ ಹುಳದ ಜಾತಿಯ ಜೀವಿಗಳನ್ನು ತಿನ್ನುವುದಕ್ಕಾಗಿ ಕೊಕ್ಕು ಈ ರೀತಿ ರೂಪುಗೊಂಡಿದೆ.

ವೂಲಿ ನೆಕ್ಡ್ ಸ್ಟಾರ್ಕ್ ಅಥವಾ ಬಿಳಿ ಕತ್ತಿನ ಸ್ಟಾರ್ಕ್ ಎಂಬ ಹಕ್ಕಿಯನ್ನು ಗೋದ್ಬಾದ ಎನ್ನುವರು. ಮೈಯೆಲ್ಲಾ ಕಪ್ಪು ಬಣ್ಣವಿದ್ದು, ಕತ್ತು ಬಿಳಿಯಾಗಿದೆ. ಇದರ ಗಡುಸಾಗಿದ್ದು ಕಪ್ಪಾಗಿದೆ. ಕಾಲುಗಳು ಕೆಂಪಾಗಿವೆ. ಸುಮಾರು 85 ಸೆಂಟಿ ಮೀಟರ್ ಎತ್ತರವಿರುವ ಇದು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಕಾಣುವುದು. ಮೀನು, ಕಪ್ಪೆ, ಶಂಖದ ಹುಳು, ಏಡಿ ಮೊದಲಾದ ಜಲಚರಗಳನ್ನು ತನ್ನ ಇಕ್ಕಳದಂತಹ ಕೊಕ್ಕಿನಲ್ಲಿ ಹಿಡಿದು ತಿನ್ನುತ್ತದೆ.

‘ಹಕ್ಕಿಗಳನ್ನು ನೋಡುವುದೇ ಚೆನ್ನ. ಇವುಗಳ ಹಾರಾಟ ನೋಡಲು ಬಹಳ ಸೊಗಸು. ಉತ್ತರ ಭಾರತದ ಕಡೆಯಿಂದ ನಮ್ಮೂರ ಕೆರೆಗೆ ಪಕ್ಷಿಗಳು ಬಂದಿರುವುದು ಸಂತಸದಾಯಕ. ಆದರೆ ಅವುಗಳಿಗೆ ತೊಂದರೆ ಮಾಡದೆ ನೋಡುವುದಕ್ಕೆ ಸೀಮಿತವಾಗಿದ್ದರೆ ಇನ್ನಷ್ಟು ಹಕ್ಕಿಗಳು ಕೆರೆಗೆ ಬರುತ್ತವೆ. ಚಳಿಗಾಲದ ಅತಿಥಿಗಳೊಂದಿಗೆ ಸ್ಥಳೀಯ ಬೆಳ್ಳಕ್ಕಿ, ಕುಂಡೆ ಕುಸ್ಕ, ಕೊಳಬಕಗಳಿಗೂ ಕೆರೆಯ ಸೆಲೆಯು ತಾಣವಾಗಿದೆ’ ಎನ್ನುತ್ತಾರೆ ಅಜಿತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.