ADVERTISEMENT

₹ 70 ಕೋಟಿಗೂ ಅಧಿಕ ಅನುದಾನ: ಮೋಟಮ್ಮ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 9:25 IST
Last Updated 5 ಜನವರಿ 2018, 9:25 IST

ಮೂಡಿಗೆರೆ: ನಾಲ್ಕೂವರೆ ವರ್ಷಗಳಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ₹ 70 ಕೋಟಿಗೂ ಅಧಿಕ ಹಣವನ್ನು ರಾಜ್ಯಸರ್ಕಾರ ಬಿಡುಗಡೆಗೊಳಿಸಿದೆ ಎಂದು ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರಕ್ಕೆ ಹಿಂದೆಂದಿಗಿಂತಲೂ ಈ ಬಾರಿಯ ಸರ್ಕಾರ ಹೆಚ್ಚಿನ ಅನುದಾನವನ್ನು ಕೊಟ್ಟಿದ್ದು, ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ಬೆಟ್ಟದಮನೆ ಸೇತುವೆ, ಗಿರಿಜನರ ಸಮಸ್ಯೆಯಾಗಿದ್ದ ಅಡ್ಡಗುಡ್ಡೆ ಸೇತುವೆ ಸೇರಿದಂತೆ ವಿವಿಧ ಸೇತುವೆಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ತಾಲ್ಲೂಕಿನ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಹಣ ಮಂಜೂರಾತಿ ನೀಡಲಾಗಿದೆ. ನಗರೋತ್ಥಾನ ಯೋಜನೆ ಯಡಿಯಲ್ಲಿ ಪಟ್ಟಣದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಈ ಸಾಲಿನಲ್ಲಿ ₹ 64 ಕೋಟಿ ವೆಚ್ಚದ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದ್ದು, ಈ ಯೋಜನೆಗಳಿಗೆ ಚಾಲನೆ ನೀಡಲು ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 5 ರಂದು ತಾಲ್ಲೂಕಿಗೆ ಬರುತ್ತಿದ್ದು, ಪಕ್ಷವು ಅವರನ್ನು ಸ್ವಾಗತಿಸುತ್ತದೆ ಎಂದರು.

ADVERTISEMENT

ತಾಲ್ಲೂಕಿಗೆ ಬರುವ ಮುಖ್ಯ ಮಂತ್ರಿಗೆ ಸ್ಥಳೀಯ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಫಿ ಬೆಳೆಗಾರರ ಒತ್ತುವರಿ ಸಮಸ್ಯೆ, ತಾಲ್ಲೂಕಿನಲ್ಲಿ ಉದ್ಭವಿಸಿರುವ ಕಾಡಾನೆ ಹಾವಳಿ ಹಾಗೂ ಹುಲಿ ದಾಳಿ ಪ್ರಕರಣಗಳನ್ನು ಸೂಕ್ತವಾಗಿ ಬಗೆಹರಿಸುವಂತೆ ಒತ್ತಾ ಯಿಸಲಾಗುವುದು.

ಪಟ್ಟಣದ ಹ್ಯಾಂಡ್‌ ಪೋಸ್ಟಿನಲ್ಲಿರುವ ತೋಟ ಗಾರಿಕೆ ಮಹಾವಿದ್ಯಾಲಯದಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಂತೆ ಮನವಿ ಮಾಡಲಾಗುವುದು ಎಂದರು. ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಯು.ಎಚ್‌. ಹೇಮಶೇಖರ್‌, ಪದಾಧಿಕಾರಿಗಳಾದ ಸಂಪತ್‌ಮುಗ್ರಳ್ಳಿ, ಜಯಮ್ಮ, ಕಮಲಾಕ್ಷಮ್ಮ, ನದೀಂ, ರವಿಕುನ್ನಳ್ಳಿ, ದಶರಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.