ADVERTISEMENT

19ರಂದು ರಾಜಗೋಪುರ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 7:20 IST
Last Updated 9 ಜನವರಿ 2018, 7:20 IST

ಕಡೂರು: ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದ ವಲ್ಮೀಕ ಆಂಜನೇಯ ಸ್ವಾಮಿ ದೇವಾಲಯದ ನೂತನ ರಾಜಗೋಪುರ ಮತ್ತು ವಿಮಾನ ಗೋಪರದ ಕಳಶಾರೋಹಣ ಸಮಾರಂಭ ಇದೇ 19 ರಂದು ಎಂದು ವಲ್ಮೀಕ ಆಂಜನೇಯಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ.ಟಿ. ಲಕ್ಕಪ್ಪ ತಿಳಿಸಿದ್ದಾರೆ.

‘ಸಮಾರಂಭದ ಅಂಗವಾಗಿ ಜನವರಿ 17ರಂದು ಧ್ವಜಾರೋಹಣ ನಡೆಯಲಿದ್ದು. 18ರಂದು ಚಿಕ್ಕ ಬಾಸೂರಿಗೆ ಸುತ್ತಮುತ್ತಲಿನ ಗ್ರಾಮ ದೇವತೆಯ ಮೂರ್ತಿಗಳನ್ನು ತರಲಾಗುವುದು. ಅಂದು ಸಂಜೆ 4 ಗಂಟೆಗೆ ಗಂಗಾಪೂಜೆ, ಯಾಗಶಾಲೆ ಪ್ರವೇಶ, ಮಹಾ ಸಂಕಲ್ಪ, ಕಳಶಸ್ಥಾಪನೆ. ವಾಸ್ತು ಹೋಮ ಮತ್ತು ಬಲಿಹರಣ ನೆರವೇರಲಿದ್ದು, ಸಂಜೆ 7 ಗಂಟೆಗೆ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘19ರಂದು ಬೆಳಿಗ್ಗೆ 108 ಪೂರ್ಣ ಕುಂಭಗಳೊಂದಿಗೆ ಗಂಗಾಪೂಜೆ ನಡೆಯಲಿದ್ದು, ನಂತರ ನವಗ್ರಹ, ಗಣ, ರುದ್ರ, ರಾಮಾತಾರಕ, ದಿಕ್ಪಾಲಕ ಮತ್ತು ಕಳಾಹೋಮಗಳು ನಡೆಯಲಿದ್ದು, ಆನಂತರ ರಾಜಗೋಪುರ ಹಾಗೂ ವಿಮಾನಗೋಪುರಕ್ಕೆ ಕಳಶಾರೋಹಣ ನಡೆಯಲಿದೆ’ ಎಂದು ಹೇಳಿದರು.

ADVERTISEMENT

ಭಗೀರಥಪೀಠದ ಪುರುಷೋತ್ತ ಮಾನಂದ ಪುರಿ ಸ್ವಾಮೀಜಿ ರಾಜ ಗೋಪುರವನ್ನು ಉದ್ಘಾಟಿಸಲಿದ್ದು, ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥಸ್ವಾಮೀಜಿ ವಿಮಾನ ಗೋಪುರ ಉದ್ಘಾಟಿಸಲಿದ್ದಾರೆ. ಕೆ.ಎಸ್. ಈಶ್ವರಪ್ಪ ಸಮುದಾಯ ಭವನ ಉದ್ಘಾಟಿಸಲಿದ್ದಾರೆ’ ಎಂದು ಹೇಳಿದರು.

ನಂತರ ಧಾರ್ಮಿಕ ಸಭೆ ನಡೆಯಲಿದ್ದು, ಹೊಸದುರ್ಗದ ಕನ ಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮತ್ತು ಮೇಲುಕೋಟೆಯ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜಿಯರ್ ಸ್ವಾಮಿಗಳು ಸಾನಿಧ್ಯವಹಿಸಲಿದ್ದು, ಯಳನಡು ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಸಭೆಯ ಅಧ್ಯಕ್ಷತೆಯನ್ನು ಶಾಸಕ ವೈ.ಎಸ್.ವಿ. ದತ್ತ ವಹಿಸಲಿದ್ದು, ಮತ್ತು ಆಂಜನೇಯ ಸ್ವಾಮಿಗೆ 101 ಎಡೆ ಮತ್ತು ದೋಣಿಸೇವೆ ಏರ್ಪಡಿಸಲಾಗಿದೆ’ ಎಂದರು. ಟ್ರಸ್ಟನ ಗೌರವಾಧ್ಯಕ್ಷ ಸಿ. ಚಂದ್ರ ಶೇಖರಯ್ಯ, ಸಿ.ಸಿ. ಚಲುವಯ್ಯ ಇದ್ದರು.

ಪುರಾತನ ದೇವಾಲಯ

ಕಡೂರಿನಿಂದ 6 ಕಿ.ಮೀ. ದೂರದಲ್ಲಿರುವ ಚಿಕ್ಕಬಾಸೂರು ಗ್ರಾಮದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ಪುರಾತನವಾದದ್ದು. ಆಂಜನೇಯಸ್ವಾಮಿ ಹುತ್ತದೊಳಗಿರುವುದು ವಿಶೇಷ.

ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ರಾಜ್ಯದಾದ್ಯಂತ ಎಲ್ಲ ಸಮುದಾಯದವರು ಈ ದೇಗುಲಕ್ಕೆ ಬರುತ್ತಾರೆ. ಈ ದೇಗುಲದಲ್ಲಿ ಭೂತಪ್ಪ, ಕೆಂಚರಾಯ ಮತ್ತು ದೊಣ್ಣಪ್ಪ ಎಂಬ ಪರಿವಾರದೇವತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.