ADVERTISEMENT

ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಲ್ಯಾಪ್‍ಟಾಪ್ ಬಳಸಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 5:56 IST
Last Updated 11 ಜನವರಿ 2018, 5:56 IST
ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪರಿಶಿಷ್ಠ ಜಾತಿ-ಪಂಗಡದ 20 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲಾಯಿತು. ಸಿಡಿಸಿ ಸದಸ್ಯ ಜಿ.ನಟರಾಜ್, ಪ್ರಾಂಶುಪಾಲ ಮಹಾಲಿಂಗಪ್ಪ ಮತ್ತಿತರರಿದ್ದರು.
ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪರಿಶಿಷ್ಠ ಜಾತಿ-ಪಂಗಡದ 20 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲಾಯಿತು. ಸಿಡಿಸಿ ಸದಸ್ಯ ಜಿ.ನಟರಾಜ್, ಪ್ರಾಂಶುಪಾಲ ಮಹಾಲಿಂಗಪ್ಪ ಮತ್ತಿತರರಿದ್ದರು.   

ಅಜ್ಜಂಪುರ: ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಸರ್ಕಾರ ಉಚಿತವಾಗಿ ನೀಡಿರುವ ಲ್ಯಾಪ್‍ಟಾಪ್‍ಗಳನ್ನು ಬಳಸುವಂತೆ ಸಿಡಿಸಿ ಸದಸ್ಯ ಜಿ.ನಟರಾಜ್ ಮನವಿ ಮಾಡಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಪರಿಶಿಷ್ಠ ಜಾತಿ-ಪಂಗಡದ 20 ವಿದ್ಯಾರ್ಥಿಗಳಿಗೆ  ಲ್ಯಾಪ್‍ಟಾಪ್ ಅನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

ಉಪನ್ಯಾಸಕ ಶಶಿಕುಮಾರ್ ಮಾತನಾಡಿ ‘ಬದಲಾದ ಕಾಲಘಟ್ಟದಲ್ಲಿ ಇಡೀ ಜಗತ್ತನ್ನು ಸಮಾನಾಂತರವಾಗಿ ತಂತ್ರಜ್ಞಾನ ಬೆಸೆದಿದ್ದು, ಜಗತ್ತಿನ ಸಂಶೋಧನೆಗಳನ್ನು ವಿಚಾರ-ವಿನಿಮಯಗಳನ್ನು ಕ್ಷಣಮಾತ್ರದಲ್ಲಿ ತಿಳಿಸುವ ತಂತ್ರಜ್ಞಾನ ಬೆಳೆದಿದೆ. ಶೈಕ್ಷಣಿಕವಾಗಿ ನೆರವಾಗಬಲ್ಲ ಲ್ಯಾಪ್‍ಟಾಪ್‍ ಅನ್ನು ವಿದ್ಯಾರ್ಥಿಗಳಿಗೆ ಸರ್ಕಾರ ಪೂರೈಸಿದ್ದು, ಇದನ್ನು ವಿದ್ಯಾರ್ಥಿಗಳು ಸದ್ವಿನಿಯೋಗ ಮಾಡಿಕೊಳ್ಳುವಂತೆ’ ಸಲಹೆ ನೀಡಿದರು.

ADVERTISEMENT

‘ಯಾವೊಬ್ಬ ವಿದ್ಯಾರ್ಥಿಯು ಆರ್ಥಿಕ ಕಾರಣದಿಂದ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸಬಾರದು ಎಂಬ ದೃಷ್ಟಿಕೋನದ ಅಡಿಯಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸುವ ಮಹತ್ವದ ಜನಪ್ರಿಯ ಮತ್ತು ವಿದ್ಯಾರ್ಥಿಪರ ಯೋಜನೆ ಅನುಷ್ಠಾನಗೊಳಿಸಿದೆ’ ಎಂದು ಸಿಡಿಸಿ ಸದಸ್ಯ ಎಚ್.ಪುಟ್ಟಸ್ವಾಮಿ ತಿಳಿಸಿದರು.

ಪ್ರಾಂಶುಪಾಲ ಮಹಾಲಿಂಗಪ್ಪ ಮಾತನಾಡಿ, ‘ಗೊಂದಲಕ್ಕೆ ಒಳಗಾದ ವಿಷಯಗಳಿಗೆ ಸ್ಫಷ್ಟೀಕರಣ, ಸ್ಫರ್ಧಾತ್ಮಕ ಪರೀಕ್ಷೆಗಳ ತಯಾರಿ, ಒಂದೇ ಯಂತ್ರದೊಳಗೆ ನೂರಾರು ಪುಸ್ತಕಗಳ ಸಂಗ್ರಹಕ್ಕೆ ಲ್ಯಾಪ್‍ಟಾಪ್ ಅವಕಾಶ ನೀಡಲಿದೆ. ಇದನ್ನು ಬಳಸಿಕೊಂಡು ಶೈಕ್ಷಣಿಕ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವಂತೆ’ ಮನವಿ ಮಾಡಿದರು.

‘ವಿದ್ಯಾರ್ಥಿಗಳಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ಲ್ಯಾಪ್‍ಟಾಪ್ ನೀಡುತ್ತಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜ ಹಾಗೂ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು’ ಎಂದು ಮುಖಂಡ ಗಡೀಹಳ್ಳಿ ಮಂಜುನಾಥ್ ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಮಂದಾಲಿ, ಇಂದಿರಾ, ಸಿಡಿಸಿ ಸದಸ್ಯ ಗಂಗಾಧರಪ್ಪ, ಚನ್ನಪ್ಪ, ಬಸವರಾಜು, ಉಪನ್ಯಾಸಕ ತಿಮ್ಮರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.