ADVERTISEMENT

ಭಯದ ನೆರಳಲ್ಲಿ ದಿನ ಕಳೆಯುವ ಮಕ್ಕಳು

ಎಚ್‌.ಎಸ್‌.ಸತೀಶ್‌ ಜೈನ್‌
Published 19 ಜನವರಿ 2018, 9:31 IST
Last Updated 19 ಜನವರಿ 2018, 9:31 IST
ಬಾಳೆಹೊನ್ನೂರು ಸಮೀಪದ ಮಹಾಲ್ ಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿರುಕು ಬಿಟ್ಟ ಗೋಡೆಗಳು.
ಬಾಳೆಹೊನ್ನೂರು ಸಮೀಪದ ಮಹಾಲ್ ಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿರುಕು ಬಿಟ್ಟ ಗೋಡೆಗಳು.   

ಮಾಗುಂಡಿ(ಬಾಳೆಹೊನ್ನೂರು): ಶಿಕ್ಷಣ ಇಲಾಖೆ ಮತ್ತು ಮಾಗುಂಡಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ನಾಲ್ಕು ತರಗತಿಗಳ ಮಕ್ಕಳು ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳಬೇಕಾದ ದುಃಸ್ಥಿತಿ ಮಹಾಲ್ ಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಂಟಾಗಿದೆ.

ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಹಾಲ್ ಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೆ ತರಗತಿಯವರೆಗೆ ಸುಮಾರು 38 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದು ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಒಟ್ಟು ನಾಲ್ಕು ಕೊಠಡಿಗಳಿದ್ದರೂ ಬಳಕೆಯಲ್ಲಿ ಕೇವಲ ಎರಡು ಕೊಠಡಿಗಳಿದ್ದು ಪಾಠ ಪ್ರವಚನಕ್ಕೆ, ಕಚೇರಿ ಕೆಲಸಗಳಿಗೆ ಹಾಗೂ ನಲಿ–ಕಲಿ ತರಗತಿಗಳಿಗೆ ಬಳಕೆಯಾಗುತ್ತಿವೆ. ಒಂದು ಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದು ಬೀಳುವ ಹಂತದಲ್ಲಿದೆ. ಇದನ್ನು ಗಮನಿಸಿ ಕೊಠಡಿ ದುರಸ್ತಿಗಾಗಿ ಮಾಗುಂಡಿ ಗ್ರಾಮ ಪಂಚಾಯಿತಿ ₹50 ಸಾವಿರ ಹಾಗೂ ಸರ್ಕಾರಿ ಶಾಲಾಭಿವೃದ್ದಿ ಸಮಿತಿ ಮೂಲಕ ₹ 50 ಸಾವಿರ ನೀಡಲಾಗಿದೆ. ಈ ಹಣದಲ್ಲಿ ಅರ್ಧಂಬರ್ದ ಕಾಮಗಾರಿ ನಡೆದಿದೆ. ಗೋಡೆಗಳಲ್ಲಿ ಬೃಹತ್ ಬಿರುಕು ಮೂಡಿದ್ದು ಈಗಲೋ ಆಗಲೋ ಕುಸಿಯುವ ಹಂತ ತಲುಪಿದೆ. ಮುಂಜಾಗ್ರತಾ ಕ್ರಮವಾಗಿ ಶಿಕ್ಷಕರು ಈ ಕೊಠಡಿಯನ್ನು ತೆರವುಗೊಳಿಸಿದ್ದಾರೆ.

ADVERTISEMENT

ಮತ್ತೊಂದು ಕೊಠಡಿಯಲ್ಲಿ ಮುರಿದ ಪಕ್ಕಾಸು, ಹಲಗೆ, ಜಂತಿ ಸೇರಿದಂತೆ ಕೊಠಡಿಯ ಪಳೆಯುಳಿಕೆಗಳನ್ನು ದಾಸ್ತಾನು ಮಾಡಲಾಗಿದ್ದು ಅಲ್ಲಿ ಇಲಿ ಹೆಗ್ಗಣಗಳು ಸೇರಿ ಗೋದಾಮಿನಂತಾಗಿದೆ. ಉಳಿದ ಎರಡು ಕೊಠಡಿಗಳಲ್ಲಿ ಒಂದರಲ್ಲಿ ನಲಿ–ಕಲಿಗಾಗಿ ಮೀಸಲಿಟ್ಟಿದ್ದರೆ ಇನ್ನೊಂದರಲ್ಲಿ ಶಾಲಾ ಕಚೇರಿ ಹಾಗೂ ಎರಡರಿಂದ ಐದನೇ ತರಗತಿವರೆಗೆ ಮಕ್ಕಳಿಗೆ ಪಾಠ ನಡೆಸಲಾಗುತ್ತಿದೆ.

ಒಂದು ತರಗತಿಗೆ ಪಾಠ ಮಾಡಿದಲ್ಲಿ ಎಲ್ಲ ತರಗತಿಗಳ ಮಕ್ಕಳೂ ಕೇಳಿಸಿಕೊಳ್ಳಬೇಕಾದ ಸ್ಥಿತಿ ಇಲ್ಲಿದೆ.ಶಾಲೆಗೆ ಹೊಂದಿಕೊಂಡಂತಿರುವ ಅಂಗನವಾಡಿ ಕೇಂದ್ರದ ಸಮೀಪದಲ್ಲಿ ಬೃಹತ್ ಮರವೊಂದಿದ್ದು ಯಾವುದೇ ಕ್ಷಣದಲ್ಲಿ ಉರುಳಿ ಬೀಳಬಹುದಾಗಿದೆ.ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುವುದು ಸ್ಥಳೀಯರ ದೂರು.

ಈ ಶಾಲೆಯಲ್ಲಿ ಅತಿಹೆಚ್ಚು ಹಿಂದುಳಿದ ವರ್ಗ ಹಾಗೂ ದಲಿತ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದಾರೆ. ಸರ್ಕಾರ ತಕ್ಷಣ ಮಕ್ಕಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸುತ್ತಾರೆ. ದಲಿತ ಸಂಘರ್ಷ ಸಮಿತಿಯ ರಾಮು ಹಾಗೂ ಸುಬ್ರಮಣ್ಯ.

* *

ವಿದ್ಯಾರ್ಥಿಗಳ ಮೇಲೆ ಗೋಡೆ ಕುಸಿದು ಆನಾಹುತ ಸಂಭವಿಸಿದಲ್ಲಿ ಅಧಿಕಾರಿಗಳೇ ಹೊಣೆಗಾರರಾಗಲಿದ್ದಾರೆ.ಶಾಲಾಭಿವೃದ್ದಿ ಸಮಿತಿ ವತಿಯಿಂದ ನೀಡಿದ ಮನವಿಗಳನ್ನು ಮಾಗುಂಡಿ ಗ್ರಾಮ ಪಂಚಾಯಿತಿ ,ಶಿಕ್ಷಣ ಇಲಾಖೆ ಗಂಬೀರವಾಗಿ ಪರಿಗಣಿಸಿಲ್ಲ.
ಗಂಗಯ್ಯ ಅಧ್ಯಕ್ಷರು ಎಸ್ ಡಿಎಂಸಿ ಮಹಾಲ್ ಗೋಡು ಕಿರಿಯ ಪ್ರಾಥಮಿಕ ಶಾಲೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.