ADVERTISEMENT

ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ ಕೊಡಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 9:50 IST
Last Updated 27 ಜನವರಿ 2018, 9:50 IST

ಮೂಡಿಗೆರೆ: ‘ವೋಟಿನ ಬಗ್ಗೆ ಅಷ್ಟೇನು ಆಸಕ್ತಿಯಿರಲಿಲ್ಲ. ಆದರೆ, ಈಗ ನಾನೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆ ಚಿಗುರಿದ್ದು, ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ದಯವಿಟ್ಟು ಅವಕಾಶ ಮಾಡಿ ಕೊಡಿ’

‘ಪ್ರಜಾವಾಣಿ’ ವತಿಯಿಂದ ಪಟ್ಟಣದ ಡಿ.ಎಸ್‌. ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ‘ವೋಟ್‌ ಮಾಡೋಣ ಬನ್ನಿ– ಯುವ ಅಭಿಯಾನ’ದಲ್ಲಿ ವಿದ್ಯಾರ್ಥಿನಿ ಮೇಘಳ ಒಡಲಾಳದ ಅಭಿಲಾಷೆ ಇದಾಗಿತ್ತು. ‘ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಿಲ್ಲ. ನನ್ನಂತೆಯೇ ಹಲವು ಸ್ನೇಹಿತರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಲ್ಲದ ಕಾರಣ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಒಂದು ಅವಕಾಶವನ್ನು ನೀಡುವ ಮೂಲಕ, ಮುಂದಿನ ಚುನಾವಣೆಯಲ್ಲಿ ನಾವೂ ನಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಬೇಕು’ ಎಂದು ಅವರು ಮನವಿ ಮಾಡಿಕೊಂಡರು.

ಅಗ್ರಹಾರದಲ್ಲಿ ನಡೆದ ಆದಿಸುಬ್ರಹ್ಮಣ್ಯ ಜಾತ್ರೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದ್ದರೂ, ಭಾಗವಹಿಸಿದ ಎಲ್ಲ ವಿದ್್ಯಾರ್ಥಿಗಳು ಅಭಿಯಾನದಲ್ಲಿ ಮುಕ್ತ ಮನಸಿನಿಂದ ಪಾಲ್ಗೊಂಡರು. ಮತದಾನದ ಮಹತ್ವ ಕುರಿತು ರಾಜ್ಯಶಾಸ್ತ್ರ ಉಪನ್ಯಾಸಕ ನೌಷದ್‌ ಮಾತನಾಡಿದ ಬಳಿಕ, ವಿದ್ಯಾರ್ಥಿಗಳಿಗೆ ಚುನಾವಣೆ ಹಾಗೂ ಮತದಾನದ ಕುರಿತು ಮನದಾಳದದ ಮಾತುಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ‘ಚುನಾವಣಾ ಪದ್ಧತಿ, ಯುವಜನರಿಗೆ ಮೀಸಲು, ಮಹಿಳೆಯರಿಗೆ ಮೀಸಲು, ಚುನಾವಣಾ ವೆಚ್ಚ ಕಡಿತ, ಚುನಾವಣಾ ಭ್ರಷ್ಟಚಾರ ಮುಂತಾದ ವಿಚಾರಗಳು ಯುವಜನರ ಧ್ವನಿಯಲ್ಲಿ ಮರ್ದನಿಸಿದವು.

ADVERTISEMENT

ಅಭಿಯಾನದಲ್ಲಿ ಪಾಲ್ಗೊಂಡ ಬಹುತೇಕ ವಿದ್ಯಾರ್ಥಿಗಳು, ಜನಪ್ರತಿನಿಧಿಗಳಿಗೆ ನಿಗದಿತ ವಿದ್ಯಾರ್ಹತೆ ನಿಗದಿಯಾಗಬೇಕು ಎಂದು ಒಕ್ಕೊರಳಿನಿಂದ ಒತ್ತಾಯಿಸಿದ್ದಲ್ಲದೇ, ಸರ್ಕಾರಿ ನೌಕರರಿಗಿರುವಂತೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಿರಬೇಕು, ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಸ್ಪಧಿರ್ಸಲು ಗರಿಷ್ಟ 2 ಅಥವಾ 3 ಬಾರಿ ಮಾತ್ರ ಅವಕಾಶ ನೀಡಬೇಕು. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು ಎಂಬ ಧೋರಣೆಗಳನ್ನು ವ್ಯಕ್ತಪಡಿಸಿದ್ದು, ಯುವ ಜನತೆಗೆ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಅವಕಾಶಗಳು ಲಭ್ಯವಾಗುತ್ತಿಲ್ಲ ಎಂಬ ಅಸಮಾಧಾನವನ್ನೂ ಹೊರ ಹಾಕಿದರು.

‘ಭಾರತವು ತಂತ್ರಜ್ಞಾನದಲ್ಲಿ ಮುಂದುವರೆದ ದೇಶವಾಗದ್ದು, ಮತದಾನಕ್ಕಾಗಿ ಸರದಿಯಲ್ಲಿ ನಿಲ್ಲುವ ಬದಲು ಆನ್‌ಲೈನ್‌ ಮೂಲಕ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಜಾರಿಯಾಗಬೇಕು, ಚುನಾವಣೆಯಲ್ಲಿ ಭಾಗವಹಿಸಲು ಕನಿಷ್ಟ ವಿದ್ಯಾರ್ಹತೆ ಹಾಗೂ ವಯಸ್ಸನ್ನು ನಿಗದಿಗೊಳಿಸುವ ಮೂಲಕ ಚುನಾವಣಾ ವ್ಯವಸ್ಥೆಯನ್ನು ಸುಧಾರಣೆಗೊಳಿಸಬೇಕು ಎಂದು ಅಂತಿಮ ಬಿ.ಎ. ವಿದ್ಯಾರ್ಥಿ ಅಭಿಲಾಷ್‌ ಆಶಯ ವ್ಯಕ್ತ ಪಡಿಸಿದರು.

‘ಇದೇ ಮೊದಲ ಬಾರಿಗೆ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದು, ಮೊದಲ ಮತ ಚಲಾವಣೆಗೆ ತುದಿಗಾಲಿನಲ್ಲಿ ನಿಂತಿದ್ದೇನೆ. ದೇಶದಲ್ಲಿ ಮದ್ಯಪಾನ ನಿಷೇಧಿಸುವ, ಯುವಜನರಿಗೆ ಉದ್ಯೋಗ ನೀಡುವ ವ್ಯಕ್ತಿಯನ್ನು ಆಯ್ಕೆ ಮಾಡುವುದಕ್ಕೆ ನನ್ನ ಮತವನ್ನು ಮೀಸಲಿಡುತ್ತೇನೆ. ದೇಶದಲ್ಲಿ ಭ್ರಷ್ಟಾಚಾರದ ಮೊದಲ ಹಂತವೇ ಚುನಾವಣೆಯಾಗಿದ್ದು, ನನ್ನ ಮತವನ್ನು ಯಾರಿಗೂ ಮಾರಿಕೊಳ್ಳದೇ, ಭಾರತವನ್ನು ಮಾದರಿ ದೇಶವನ್ನಾಗಿ ನಿರ್ಮಿಸಲು ಬಳಸಿಕೊಳ್ಳುತ್ತೇನೆ’ ಎಂದು ವಿದ್ಯಾರ್ಥಿನಿ ಕೌಸಲ್ಯ ಆಶಯ ವ್ಯಕ್ತ ಪಡಿಸಿದರು.

ಉಪನ್ಯಾಸಕ ನೌಷದ್‌ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಮತದಾನದ ಪ್ರಮಾಣ ಹೆಚ್ಚಾಗಬೇಕಾದ ಅವಶ್ಯಕತೆಯಿದೆ. ಯುವ ಜನರು ಮನಸ್ಸು ಮಾಡಿದರೆ ಈ ಸಾಧನೆ ಸಾಧ್ಯವಾಗುತ್ತದೆ. ಕೇವಲ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಮಾತ್ರ ಆಸಕ್ತಿ ತೋರದೇ, ಮತದಾರರ ಪಟ್ಟಿಯಲ್ಲಿರುವವರು ತಪ್ಪದೇ ಮತದಾನ ಮಾಡಬೇಕು’ ಎಂದರು.

ಪ್ರಾಂಶುಪಾಲ ಪ್ರೊ. ಬಿ.ಸಿ. ಬಸವರಾಜಪ್ಪ ಮಾತನಾಡಿ, ‘ದೇಶದಲ್ಲಿ ಸಾರ್ವತ್ರಿಕ ಮತದಾನ ವ್ಯವಸ್ಥೆ ಜಾರಿಯಾದ ನಂತರದ ಅಂಕಿ ಅಂಶಗಳನ್ನು ವೀಕ್ಷಿಸಿದರೆ, ಇತ್ತೀಚೆಗೆ ಮತದಾನದ ಪ್ರಮಾನವು ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತದೆ. ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ತಪ್ಪದೇ ಮತದಾನದಲ್ಲಿ ಭಾಗವಹಿಸಿ, ತಮ್ಮ ಹಕ್ಕು ಚಲಾಯಿಸಬೇಕು’ ಎಂದರು. ಉಪನ್ಯಾಸಕರಾದ ರವೀಂದ್ರರಾಜನ್‌, ದಯಾನಂದ್‌, ಡಿಸೋಜಾ, ಕವಿತ, ವೀರೇಶ್ ಪಾಲ್ಗೊಂಡರು.

* * 

ಒಂದು ಮತಕ್ಕೆ ದೇಶದ ಆಡಳಿತ ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿಯಿದ್ದು, ಯುವ ಜನರು ಹೆಚ್ಚಾಗಿ ಮತದಾನದಲ್ಲಿ ಪಾಲ್ಗೊಂಡು ಅರ್ಹ ವ್ಯಕ್ತಿಗಳಿಗೆ ಅಧಿಕಾರ ನೀಡಬೇಕು.
ಮೇಘ
ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.