ADVERTISEMENT

ಸಖರಾಯಪಟ್ಟಣದಲ್ಲಿ ರಸ್ತೆ ತಡೆ- ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:48 IST
Last Updated 9 ಫೆಬ್ರುವರಿ 2018, 9:48 IST
ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಅಯ್ಯನಕೆರೆಯ ನೀರನ್ನು ಹೊರಬಿಟ್ಟಿರುವ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.
ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಅಯ್ಯನಕೆರೆಯ ನೀರನ್ನು ಹೊರಬಿಟ್ಟಿರುವ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.   

ಕಡೂರು: ಅಯ್ಯನಕೆರೆಯ ನೀರನ್ನು ಕುಡಿಯುವುದಕ್ಕಾಗಿ ಕಾಯ್ದಿಡುವುದನ್ನು ಬಿಟ್ಟು, ಬೇರೆ ಕಡೆಗೆ ಹರಿಸಿರುವ ನೀರಾವರಿ ಇಲಾಖೆಯ ಕ್ರಮವನ್ನು ಖಂಡಿಸಿ ಸಖರಾಯಪಟ್ಟಣ ಗ್ರಾಮಸ್ಥರು ಗುರುವಾರ ರಸ್ತೆ ತಡೆ ನಡೆಸಿದರು.

ಸಖರಾಯಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಅಯ್ಯನಕೆರೆಯನ್ನು ಅವಲಂಬಿಸಿದ್ದಾರೆ. ಪ್ರಸ್ತುತ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದು, 10 ದಿನಗಳ ಹಿಂದೆ ಅಯ್ಯನಕೆರೆಯಿಂದ ಸಖರಾಯಪಟ್ಟಣದ ಬಸವನಕಾಲುವೆ, ಊರುಕಾಲುವೆ ಮತ್ತು ಕಡೆಕಾಲುವೆಯಲ್ಲಿ ನೀರು ಬಿಡಲಾಗುತ್ತಿತ್ತು. ಅದನ್ನು ನಿಲ್ಲಿಸಿ ಮತ್ತೊಂದು ಕಾಲುವೆಯ ಮೂಲಕ ವೇದಾವತಿ ನದಿ ಹಾದಿಯಲ್ಲಿ ಬ್ರಹ್ಮಸಮುದ್ರದ ರೈತರಿಗೆ ನೀರನ್ನು ನೀಡಲಾಗುತ್ತಿತ್ತು.

ಅಯ್ಯನಕೆರೆಯಲ್ಲಿ ಕೇವಲ ನಾಲ್ಕು ಅಡಿ ನೀರು ಇರುವುದನ್ನು ಕಂಡ ಸಖರಾಯಪಟ್ಟಣ ಗ್ರಾಮಸ್ಥರು ಈ ನೀರನ್ನು ಕುಡಿಯುವ ಮತ್ತು ಜಾನುವಾರುಗಳಿಗಾಗಿ ಕೆರೆಯಲ್ಲಿ ಕಾಯ್ದಿರಿಸಬೇಕು ಎಂದು ಜಿಲ್ಲಾಧಿಕಾರಿಗೆ ಫೆ. 7ರಂದು ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಮೂಲಕ ಮನವಿ ಸಲ್ಲಿಸಲಾಗಿತ್ತು. ಬುಧವಾರ ಸಂಜೆ ಬ್ರಹ್ಮ ಸಮುದ್ರದ ಕಡೆಗೆ ಹೋಗುವ ನೀರನ್ನು ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಆದರೆ, ಗುರುವಾರ ಏಕಾಏಕಿ ಮತ್ತೆ ಬ್ರಹ್ಮಸಮುದ್ರ ಕಡೆಗೆ ಅಯ್ಯನಕೆರೆ ನೀರು ಹರಿಸಲು ಆರಂಭಿಸಿದ್ದನ್ನು ಖಂಡಿಸಿ ಸಖರಾಯಪಟ್ಟಣ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಕೆ.ಎಂ. ರಸ್ತೆಯಲ್ಲಿ ಧರಣಿ ಕುಳಿತು 1 ಗಂಟೆಗೂ ಹೆಚ್ಚಿನ ಕಾಲ ರಸ್ತೆ ತಡೆ ನಡೆಸಿದರು.

ADVERTISEMENT

ಸಖರಾಯಪಟ್ಟಣ ಪಿಎಸ್‌ಐ ಸುನೀತ ಅವರು, ಧರಣಿ ನಿರತರನ್ನು ಮನವೊಲಿಸಲು ಯತ್ನಿಸಿದರೂ ಜಗ್ಗಲ್ಲಿಲ್ಲ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಚನ್ನಬಸಪ್ಪ ಅವರನ್ನು ಪ್ರತಿಭಟನಾನಿರತರು ತರಾಟೆಗೆ ತೆಗೆದುಕೊಂಡಾಗ, ‘ಜಿಲ್ಲಾಧಿಕಾರಿಯ ಮೌಖಿಕ ಆದೇಶದಂತೆ ನೀರು ಬಿಟ್ಟಿದ್ದೇವೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯೋಗಿಂದ್ರ ಮಾತನಾಡಿ, ‘ಕೆರೆಯಲ್ಲಿರುವ ನಾಲ್ಕು ಅಡಿ ನೀರನ್ನು ಕೇವಲ ಕುಡಿಯುವ ನೀರಿಗಾಗಿ ಕಾಯ್ದಿರಿಸಲು ಮನವಿ ಮಾಡಿದ್ದು, ಜಿಲ್ಲಾಧಿಕಾರಿ ಅದಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೂ ಮತ್ತೆ ಕೃಷಿಗಾಗಿ ಕೆರೆಯ ನೀರನ್ನು ಬಿಟ್ಟಿರುವುದು ಸರಿಯಲ್ಲ. ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾದರೆ ಅದಕ್ಕೆ ನೀವೇ ಹೊಣೆಗಾರರು’ ಎಂದು ಚನ್ನಬಸಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ನಂತರ ಚನ್ನಬಸಪ್ಪ ಅವರು ಗ್ರಾಮ ಪಂಚಾಯಿತಿ ಸದಸ್ಯರೊಡನೆ ಅಯ್ಯನಕೆರೆಗೆ ತೆರಳಿ ನೀರು ಹರಿಯುವುದನ್ನು ನಿಲ್ಲಿಸಿದ ನಂತರ ಪ್ರತಿಭಟನಾಕಾರರು ಧರಣಿಯನ್ನು ಹಿಂಪಡೆದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 1 ಗಂಟೆಗೂ ಹೆಚ್ಚಿನ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾಬಾಯಿ, ತಾಲ್ಲೂಕು ಪಂಚಾಯಿತಿ ಸದಸ್ಯ ಆನಂದನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ್ ಇದ್ದರು.

ಯಾರು ಹೊಣೆ?

ಸಣ್ಣ ನೀರಾವರಿ ಎಂಜಿನಿಯರ್ ಚನ್ನಬಸಪ್ಪ ಅವರು ಜಿಲ್ಲಾಧಿಕಾರಿಯ ಮೌಖಿಕ ಆದೇಶ ನೀಡಿರುವುದರಿಂದ ನೀರು ಹರಿಸಲಾಗಿದೆ ಎನ್ನುತ್ತಾರೆ. ಆದರೆ, ಜಿಲ್ಲಾಧಿಕಾರಿ ಆ ರೀತಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ರೀತಿಯಾದರೆ ಕುಡಿಯುವ ನೀರಿನ ಹಾಹಾಕಾರವಾದರೆ ಅದಕ್ಕೆ ಯಾರು ಹೊಣೆಯಾಗುತ್ತಾರೆ ಎಂದು ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಿಂದ್ರ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.