ADVERTISEMENT

ದಹನಯಂತ್ರ ಅಳವಡಿಕೆಗೆ ಕ್ರಮ: ಶಿಲ್ಪಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 9:09 IST
Last Updated 10 ಫೆಬ್ರುವರಿ 2018, 9:09 IST
ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌
ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌   

ಚಿಕ್ಕಮಗಳೂರು: ನಗರದ ಘನತ್ಯಾಜ್ಯ ವಿಲೇವಾರಿ, ನಿರ್ವಹಣೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಗರದ ನಾಲ್ಕು ಕಡೆ ಘನತ್ಯಾಜ್ಯ ದಹನ ಯಂತ್ರ ಅಳವಡಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂದಾವರ ಬಳಿಯ ಕಸಸಂಗ್ರಹಣೆ ತಾಕಿನಲ್ಲಿ ಕಸ ಸುರಿಯದಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಕಸ ವಿಲೇವಾರಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವುದು ಸವಾಲಾಗಿ ಪರಿಣಮಿಸಿದೆ. ಇಂದಾವರ ಕಸ ಸಂಗ್ರಹಣೆ ತಾಕು ಮತ್ತು ನಗರಸಭೆ ಆವರಣದಲ್ಲಿ ಪ್ರಯೋಗಾರ್ಥವಾಗಿ ದಹನಯಂತ್ರಗಳನ್ನು ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ಒಂದು ದಹನಯಂತ್ರಕ್ಕೆ ಸುಮಾರು ₹ 30 ಲಕ್ಷ ವೆಚ್ಚವಾಗಲಿದೆ. ನಗರದಲ್ಲಿ ದಿನಕ್ಕೆ 30 ರಿಂದ 40 ಟನ್‌ ಘನತ್ಯಾಜ್ಯ ಸಂಗ್ರಹವಾಗುತ್ತದೆ. ಒಂದು ಯಂತ್ರದಲ್ಲಿ ದಿನಕ್ಕೆ ಸುಮಾರು ನಾಲ್ಕು ಟನ್‌ ಘನತ್ಯಾಜ್ಯ ದಹನ ಮಾಡಬಹುದಾಗಿದೆ. ರಾಮನಹಳ್ಳಿ ಸ್ಮಶಾನದ ಬಳಿ, ಗೃಹಮಂಡಳಿ ಬಡಾವಣೆಯ ಫಿಲ್ಟರ್‌ ಬೆಡ್‌ ಬಳಿಯೂ ದಹನಯಂತ್ರಗಳನ್ನು ಅಳವಡಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಇಂದಾವರ ಬಳಿಯ ಕಸ ಸಂಗ್ರಹಣೆ ತಾಕನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲಿ 25 ಎಕರೆ ಜಾಗದಲ್ಲಿ ಕಸ ಸಂಗ್ರಹಣೆ ತಾಕು ನಿರ್ಮಿಸಲಾಗಿದೆ. ಸ್ಥಳಾಂತರ ಮಾಡುವುದು ಕಷ್ಟ. ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು. ಇನ್ನು ಮೂರು ತಿಂಗಳಲ್ಲಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು’ ಎಂದರು.

‘ಕಸ ಸಂಗ್ರಹಣೆ ತಾಕಿನಲ್ಲಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸುತ್ತದೆ, ದುರ್ನಾತದ ಸಮಸ್ಯೆ ವಿಪರೀತವಾಗಿದೆ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಮೂರು ದಿನಗಳಿಂದ ಕಸ ವಿಲೇವಾರಿ ವಾಹನಗಳನ್ನು ತಡೆದಿದ್ದಾರೆ. ಹೀಗಾಗಿ, ನಗರದ ಹಳೆಯ ಜೈಲು ಬಳಿ ಸದ್ಯಕ್ಕೆ ವಿಲೇವಾರಿ ಮಾಡಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು’ ಎಂದು ಹೇಳಿದರು.

‘ಘನ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ನಗರಸಭೆಯು ಐಟಿಸಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸಂಸ್ಥೆಯವರು ಸಮೀಕ್ಷೆ ನಡೆಸಿ ಐದಾರು ವಾರ್ಡ್‌ಗಳಲ್ಲಿ ಮನೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದರು. ನಂತರ, ಕಾರ್ಯ ಸ್ಥಗಿತಗೊಳಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಎಸ್ಪಿ ಭೇಟಿಗೆ ಗ್ರಾಮಸ್ಥರ ನಿರ್ಧಾರ

ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಇಂದಾವರ ಗ್ರಾಮಸ್ಥರೊಂದಿಗೆ ಗ್ರಾಮಾಂತರ ಠಾಣೆ ಪೊಲೀಸರು ಸಂಧಾನ ಸಭೆ ನಡೆಸಿದ್ದಾರೆ. ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ತಡೆಯದಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಪರಿಹರಿಸಿಕೊಳ್ಳಲು ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.10ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರನ್ನು ಭೇಟಿ ಮಾಡುವುದಾಗಿ ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮದ ಮುಖಂಡರಾದ ಲೋಕೇಶ್‌, ಚಂದ್ರಶೇಖರ್‌ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.