ADVERTISEMENT

ಕಡೂರಿನಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ: ನಿರಂತರ ಗಣೇಶ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 9:18 IST
Last Updated 20 ಫೆಬ್ರುವರಿ 2018, 9:18 IST

ಕಡೂರು: ಕಡೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣವಿದೆ. ಎಲ್ಲ ನಾಯಕರು ಒಗ್ಗಟ್ಟಾಗಿ ಚುನಾವಣೆಯಲ್ಲಿ ದುಡಿದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಗಳಿಸುವಲ್ಲಿ ಅನುಮಾನವಿಲ್ಲ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ನಿರಂತರ ಗಣೇಶ್ ತಿಳಿಸಿದರು.

ಭಾನುವಾರ ಕಡೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಗ್ರ ಕರ್ನಾಟಕದ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ.

ಬಜೆಟ್‌ನಲ್ಲಿ ಎಲ್ಲ ರಂಗಗಳಿಗೆ ಮತ್ತು ಎಲ್ಲ ವರ್ಗಗಳಿಗೆ ಸಮಾನ ಪ್ರಾತಿನಿಧ್ಯ ಹಾಗೂ ಪ್ರಾದೇಶಿಕ ಸಮಾನತೆಯನ್ನು ಕಾಪಾಡಿಕೊಂಡು ಅನುದಾನ ಹಂಚಿಕೆ ಮಾಡಲಾಗಿದೆ. ಎಲ್ಲ ರೀತಿಯ ಅಭಿವೃದ್ಧಿಗೆ ಅವಕಾಶಗಳಿವೆ.

ADVERTISEMENT

ಬಹುಮುಖ್ಯವಾಗಿ ರೈತರ ಬದುಕು ಹಸನಾಗುವ ನಿಟ್ಟಿನಲ್ಲಿ ನೀರಾವರಿ ಕ್ಷೇತ್ರಕ್ಕೆ ಅತ್ಯಂತ ಹೆಚ್ಚಿನ ಪಾಲು ನೀಡಿರುವುದು ಶ್ಲಾಘನೀಯವಾದುವು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವುದು ಕ್ರಾಂತಿಕಾರಿ ನಿರ್ಧಾರ. ಇದಲ್ಲದೆ, ಹಿಂದುಳಿದ ವರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಒಟ್ಟಾರೆಯಾಗಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಈ ಬಜೆಟ್ ಪೂರಕ’ ಎಂದರು.

ಕಾವೇರಿ ನದಿ ನೀರು ವಿಚಾರದಲ್ಲಿ ಬಂದಿರುವ ತೀರ್ಪು ಹರ್ಷದಾಯಕವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಟ್ಟಿಗೆ ಮೇಲ್ನೋಟಕ್ಕೆ ಯಾವ ಯೋಜನೆಯೂ ಇಲ್ಲ ಎಂದೆನಿಸಿದರೂ ಒಟ್ಟಾರೆ, ಬಜೆಟ್ ಅನುಷ್ಠಾನದಲ್ಲಿ ಜಿಲ್ಲೆಯೂ ಸೇರಿದೆ. ಜಿಲ್ಲೆಗೆ ಸ್ನಾತಕೋತ್ತರ ಕೇಂದ್ರ ಮಂಜೂರಾಗಿರುವುದು ಶಿಕ್ಷಣದ ದೃಷ್ಟಿಯಿಂದ ಪ್ರಮುಖ ಹೆಜ್ಜೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.