
ರಾವೂರು (ನರಸಿಂಹರಾಜಪುರ): ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸ್ತುತ ಭದ್ರಾಹಿನ್ನೀರಿಗೆ 62 ಲಕ್ಷ ಮೀನು ಮರಿಗಳನ್ನು ಬಿಡಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾವೂರು ಗ್ರಾಮದ ಭದ್ರಾಹಿನ್ನೀರಿನಲ್ಲಿ ಶನಿವಾರ ಮೀನುಗಾರಿಕೆ ಇಲಾಖೆಯಿಂದ ಮೀನುಮರಿಗಳನ್ನು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭದ್ರಾಹಿನ್ನೀರಿಗೆ ಪ್ರಸ್ತುತ 1 ಕೋಟಿ ಮೀನುಮರಿಗಳನ್ನು ಬಿಡುವ ಬಗ್ಗೆ ನಿರ್ಧಾರ ಮಾಡಲಾಗಿದ್ದು, ಪ್ರಸ್ತುತ 62 ಲಕ್ಷ ಮೀನುಮರಿಗಳನ್ನು ಬಿಡಲಾಗುತ್ತಿದೆ. ಭದ್ರಾಹಿನ್ನೀರಿನ ಇತಿಹಾಸದಲ್ಲಿ ಏಕಕಾಲದಲ್ಲಿ 62 ಲಕ್ಷ ಮೀನು ಮರಿ ಬಿಡುತ್ತಿರುವುದರಿಂದ ಇದೇ ಮೊದಲಬಾರಿಯಾಗಿದೆ. ಕಳೆದ 5 ವರ್ಷಗಳ ಶಾಸಕರ ಅವಧಿಯಲ್ಲಿ 1.10 ಕೋಟಿ ಮೀನು ಮರಿಗಳನ್ನು ಬಿಡಲಾಗಿತ್ತು. ಸರ್ಕಾರದ ಫಾರಂ ಮತ್ತು ಖಾಸಗಿ ಫಾರಂಗಳಲ್ಲಿ ಬೆಳೆಸಿದ ಮೀನುಮರಿಗಳನ್ನು ಬಿಡಲಾಗುತ್ತಿದೆ. ಮೀನುಗಾರರು ಮೀನುಗಳ ಸಂತಾನೋತ್ಪತ್ತಿ ಸಮಯದಲ್ಲಿ ಮೀನುಗಾರಿಕೆ ಮಾಡಬಾರದು. ಅಲ್ಲದೆ ಚಿಕ್ಕ ಬಲೆಯನ್ನು ಬಿಟ್ಟು ಮೀನುಗಾರಿಕೆ ಮಾಡಬಾರದು. ಕನಿಷ್ಠ 2 ಕೆ.ಜಿ ಮೇಲ್ಪಟ್ಟ ಮೀನುಗಳು ಶಿಕಾರಿಯಾಗುವಂತಹ ಬಲೆಗಳನ್ನು ಬಿಡಬೇಕು ಎಂದು ಹೇಳಿದರು.
ಮೀನುಗಾರರ ಬೇಡಿಕೆಯಂತೆ 12 ಅಡಿ ದೋಣಿ ಕೊಡಲಾಗುತ್ತಿದೆ.ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯರಿಗೆ ಪತ್ರ ಬರೆದ ಒಂದು ವಾರದಲ್ಲಿಯೇ ಮೀನು ಮರಿಗಳನ್ನು ಬಿಡುಗಡೆ ಮಾಡಿದ್ದಾರೆ. ಮೀನು ಮರಿಗಳನ್ನು ಏಕಕಾಲದಲ್ಲಿ ಎಲ್ಲವನ್ನು ಬಿಡದೆ ವಾರಕ್ಕೆ 10 ಲಕ್ಷದಂತೆ ಬಿಡಲಾಗುವುದು. ರಾವೂರು, ಲಿಂಗಾಪುರ, ಹೊನ್ನೆಕೂಡಿಗೆ ಭಾಗದ ಭದ್ರಾಹಿನ್ನೀರಿಗೆ ಮೀನುಮರಿಗಳನ್ನು ಬಿಡಲಾಗುವುದು. ಮೀನುಗಾರರು ಮೀನುಗಾರಿಕೆ ಇಲಾಖೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.
ಮುಖಂಡರಾದ ಪ್ರಶಾಂತ್ ಶೆಟ್ಟಿ, ನಿಶಾಂತ, ಸದಾಶಿವ, ಯಾಸ್ಮಿನ್, ಉಮಾ, ಜುಬೇದಾ, ಚಂದ್ರು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಹನಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.