
ಕೊಪ್ಪ: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗಾಗಿ ಕಳೆದ 2 ವರ್ಷಗಳಲ್ಲಿ ₹ 9.22 ಕೋಟಿ ಅನುದಾನ ಕೊಟ್ಟಿದ್ದೇನೆ. ಕ್ರೆಡೆಲ್ ಅಧ್ಯಕ್ಷನಾದ ಎರಡೇ ದಿನದಲ್ಲಿ ₹ 90 ಲಕ್ಷ ಮಂಜೂರು ಮಾಡಿಸಿದ್ದೇನೆ. ಒಳಾಂಗಣ ಕ್ರೀಡಾಂಗಣ ಪೂರ್ಣಗೊಳಿಸಲು ಬೇಕಿರುವ ₹50 ಲಕ್ಷವನ್ನು ಸದ್ಯದಲ್ಲೇ ಮಂಜೂರು ಮಾಡಿಸಲಾಗುವುದು’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಬಾಳಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವ ನಿಧಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
'ಪದವಿ, ಡಿಪ್ಲೊಮಾ ಮಾಡಿದ ವಿದ್ಯಾರ್ಥಿಗಳಿಗೆ ಯುವ ನಿಧಿ ಬಲ ನೀಡಿದೆ. ವಿರೋಧ ಪಕ್ಷಗಳು ರಾಜಕೀಯವಾಗಿ ಟೀಕಿಸಿವೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತುಕೊಟ್ಟು ಕೆಲಸ ಮಾಡುತ್ತಿದ್ದೇನೆ. ಕಾಲೇಜಿಗೆ ಉತ್ತಮ ಫಲಿತಾಂಶ ಬರಬೇಕು, ವಿದ್ಯಾರ್ಥಿಗಳು ಸಾಧಕರಾಗಬೇಕು. ಅದೇ ನಮಗೆ ಹೆಮ್ಮೆ. ಕಾಲೇಜಿಗೆ ಬೇಕಾದ ಸವಲತ್ತು, ಸಲಕರಣೆ ಕೊಡಲು ಬದ್ಧನಿದ್ದೇನೆ' ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಶಿವಾನಂದ ಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಪಕ್ಷ 2023ರ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆ ಗ್ಯಾರಂಟಿ ಯೋಜನೆಗೆ ಇಡೀ ಜಗತ್ತು ಮೆಚ್ಚಿದೆ. ವಿಶ್ವಸಂಸ್ಥೆ ಅಭಿನಂದಿಸಿದೆ. ದೇಶದಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಯೋಜನೆ ಅನುಷ್ಠಾನ ವಿಚಾರದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ’ ಎಂದರು.
ಜವಾಹರ ಲಾಲ್ ನೆಹರೂ ಅವರ ಕುರಿತು ಮಾತನಾಡಿದ ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ‘ಸ್ವಾತಂತ್ರ್ಯಕ್ಕಾಗಿ ಜವಾಹರ ನೆಹರೂ ಹೋರಾಟ ರೂಪಿಸಿದ್ದರು. ಅವರು ದೇಶದ ಭವಿಷ್ಯವನ್ನು ಮಕ್ಕಳಲ್ಲಿ ಕಂಡರು. ನೆಹರೂ ಜೈಲಲ್ಲಿ ಇದ್ದಾಗ ಬರೆದ ಕೃತಿ ದೇಶದ ಚಿತ್ರಣ ಕಟ್ಟಿಕೊಟ್ಟಿದೆ. ಬಡತನ ನಿರ್ಮೂಲನೆಗೆ ಒತ್ತುಕೊಟ್ಟರು. ಪಂಚವಾರ್ಷಿಕ ಯೋಜನೆ ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಭಿಕ್ಷೆಯಲ್ಲ, ಅದು ಎಲ್ಲರ ಹಕ್ಕು. ಕೇಳಿ ಪಡೆಯಬೇಕು' ಎಂದು ತಿಳಿಸಿದರು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, 'ಕೊಪ್ಪ ತಾಲ್ಲೂಕಿನ ಪದವೀಧರರು, ಡಿಪ್ಲೊಮಾ ಮಾಡಿದವರ ಪೈಕಿ ಕಡಿಮೆ ಮಂದಿ ಯುವ ನಿಧಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಆ ಸಂಖ್ಯೆ ಹೆಚ್ಚಿಸಬೇಕಿದೆ. ಪಟ್ಟಣ ವ್ಯಾಪ್ತಿಯ ಬಾಳಗಡಿಗೆ ಪ್ರತಿ ಗಂಟೆಗೆ ಒಮ್ಮೆ ಸರ್ಕಾರಿ ಬಸ್ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ' ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಬೆಳ್ಳಾಲೆ ಮಾತನಾಡಿದರು. ಹರಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಪ್ರಾಂಶುಪಾಲ ಪ್ರೊ.ಎಸ್.ಅನಂತ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಎಸ್.ನಾಗೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮೈತ್ರಿ, ನಾಮನಿರ್ದೇಶಿತ ಸದಸ್ಯೆ ಸುಮಾ ಪರ್ವತೆಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಬಗರ್ ಹುಕುಂ ಸಮಿತಿ ಸದಸ್ಯರು, ಕೆಡಿಪಿ ಸದಸ್ಯರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಹಾಜರಿದ್ದರು.
ಸಿ.ಎ ಪರೀಕ್ಷೆ ಪಾಸು ಮಾಡಿದ ವಿದ್ಯಾರ್ಥಿಗೆ ಸನ್ಮಾನ
ಇತ್ತೀಚೆಗೆ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಾಳಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರಮೋದ್ ಅವರನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ನೂತನ ಕಾರ್ಯಾಧ್ಯಕ್ಷ ಈಶ್ವರ ಬೆಳ್ಳಾಲೆ ಅವರನ್ನು ಅಭಿನಂದಿಸಲಾಯಿತು. ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾಲಯ ಮಟ್ಟದಲ್ಲಿ ಶಿಕಾರಿಪುರದಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಶಾಸಕರು ಅಭಿನಂದಿಸಿದರು. ‘ನಾನೊಬ್ಬ ಗ್ರಾಮೀಣ ಭಾಗದ ವಿದ್ಯಾರ್ಥಿ. ನನ್ನಿಂದ ಸಾಧ್ಯವಾಗಿದ್ದು ನಿಮ್ಮಿಂದಲೂ ಸಾಧ್ಯವಿದೆ. ನಮ್ಮ ಮೇಲೆ ನಮಗೆ ನಂಬಿಕೆ ಧೈರ್ಯ ಇರಬೇಕು. ಇದರಿಂದ ಎಂತಹ ಕಠಿಣ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತದೆ’ ಎಂದು ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ಪ್ರಮೋದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.