ADVERTISEMENT

ಕಲ್ಲಂಗಡಿ ದರ ಇಳಿಕೆ: ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 12:46 IST
Last Updated 3 ಮಾರ್ಚ್ 2023, 12:46 IST
ಮೂಡಿಗೆರೆ ಪಟ್ಟಣದ ಗಂಗನಮಕ್ಕಿ ಬಳಿ ಕಲ್ಲಂಗಡಿ ಹಣ್ಣಿನ ಅಂಗಡಿ
ಮೂಡಿಗೆರೆ ಪಟ್ಟಣದ ಗಂಗನಮಕ್ಕಿ ಬಳಿ ಕಲ್ಲಂಗಡಿ ಹಣ್ಣಿನ ಅಂಗಡಿ   

ಮೂಡಿಗೆರೆ: ಮಲೆನಾಡಿನಲ್ಲಿ ಬಿಸಿಲ ಬೇಗೆ ಹೆಚ್ಚಾದ ಬೆನ್ನಲ್ಲೇ ಕಲ್ಲಂಗಡಿ ರಾಶಿರಾಶಿಯಾಗಿ ಬರತೊಡಗಿದ್ದು, ದರವೂ ಇಳಿಕೆಯಾಗಿದೆ.

ಕೋಲಾರ, ಶಿಡ್ಲಘಟ್ಟ, ಗುಂಡುಪೇಟೆ ಭಾಗಗಳಿಂದ ತಾಲ್ಲೂಕಿಗೆ ಕಲ್ಲಂಗಡಿ ಪೂರೈಕೆಯಾಗುತ್ತಿದೆ. ಜನವರಿ ಮೊದಲ ವಾರ ಕೆ.ಜಿ.ಯೊಂದಕ್ಕೆ ₹40 ಇದ್ದ ಕಲ್ಲಂಗಡಿ, ಈಗ ₹20ಕ್ಕೆ ಇಳಿಕೆಯಾಗಿದೆ. ಪಟ್ಟಣದಲ್ಲಿ 12 ಕಲ್ಲಂಗಡಿ ಮಾರಾಟದ ಅಂಗಡಿಗಳಿದ್ದು, ಹೋಲ್‌ಸೇಲ್ ಮಾರಾಟದ ಎರಡು ಅಂಗಡಿಗಳಿವೆ. ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ ಭಾಗಗಳಿಗೆ ಇಲ್ಲಿಂದಲೇ ಹಣ್ಣು ಸರಬರಾಜು ಆಗುತ್ತದೆ.

‘ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆ ಇದೆ. ಬೆಳೆ ಹೆಚ್ಚಾಗಿದ್ದು ಧಾರಾಳವಾಗಿ ಪೂರೈಕೆ ಆಗುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ. ಹೋಲ್‌ಸೇಲ್ ವ್ಯಾಪಾರದಲ್ಲಿ ಕೆ.ಜಿಯೊಂದಕ್ಕೆ ₹ 12ರಿಂದ ₹ 15ಕ್ಕೆ ಮಾತ್ರ ಇದೆ’ ಎನ್ನುತ್ತಾರೆ ವ್ಯಾಪಾರಿ ಸಲ್ಮಾನ್.

ADVERTISEMENT

‘ಕಪ್ಪುಬಣ್ಣದ ಕಲ್ಲಂಗಡಿಯ ಒಳಭಾಗ ಹೆಚ್ಚು ಕೆಂಪಾಗಿದ್ದು ರುಚಿಕರವಾಗಿರುವುದರಿಂದ ಆ ಕಲ್ಲಂಗಡಿ ನಮಗೆ ಹೆಚ್ಚು ಪ್ರಿಯ’ ಎಂದು ಕಲ್ಲಂಗಡಿ ಖರೀದಿಗೆ ಬಂದಿದ್ದ ಅಗ್ರಹಾರ ಸುರೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.