ADVERTISEMENT

ಬಸ್ ಮಗುಚಿ ಮಗು ಸಾವು

ಚಾಲಕ ಬದಲು ನಿರ್ವಾಹಕ ಚಲಾಯಿಸುತ್ತಿದ್ದ ಬಸ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 12:31 IST
Last Updated 1 ನವೆಂಬರ್ 2019, 12:31 IST
ಸುಹಾಸ್
ಸುಹಾಸ್   

ಅಜ್ಜಂಪುರ: ಪಟ್ಟಣ ಸಮೀಪ ಕಾಟಿಗನರೆ ಗೇಟ್ ಬಳಿ ಶುಕ್ರವಾರ ನಸುಕಿನ ಜಾವ ಕೆಎಸ್‍ಆರ್‌ಟಿಸಿ ಬಸ್ ಮಗುಚಿ ಚಿತ್ರದುರ್ಗ ಮೂಲದ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಇತರೆ ಒಂಬತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಚಿತ್ರದುರ್ಗ ತಾಲ್ಲೂಕು ಉಲ್ಲೂರು ಲಂಬಾಣಿಹಟ್ಟಿಯ ಶಂಕರ್ ನಾಯಕ್ ಮತ್ತು ಹೇಮಾವತಿ ಅವರ ಪುತ್ರ ಸುಹಾಸ್ ಮೃತ ಮಗು. ಬೆಳ್ತಂಗಡಿ ತಾಲ್ಲೂಕಿನ ನಾವೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಹೇಮಾವತಿ ಅವರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿಗೆ ವರ್ಗಾವಣೆ ಆಗಿತ್ತು. ಈ ಸಂಬಂಧ ಧರ್ಮಸ್ಥಳದಲ್ಲಿ ಬಸ್ ಏರಿದ ಅವರು ಮೊಳಕಾಲ್ಮೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಲು ಮಗು, ಪತಿ ಸಮೇತ ಪ್ರಯಾಣಿಸುತ್ತಿದ್ದರು.

ಅಜ್ಜಂಪುರದಲ್ಲಿ ರೈಲ್ವೆಗೇಟ್ ಹಾಕಿದ್ದರಿಂದ ಬಸ್ ನಿಲುಗಡೆಗೊಂಡಿತು. ಬಳಿಕ ಚಾಲಕನ ಬದಲಿಗೆ ನಿರ್ವಾಹಕನೇ ಬಸ್ ಚಲಾಯಿಸಿದ. ಮೂರ್ನಾಲ್ಕು ಕಿ.ಮೀ. ದೂರ ಸಾಗುತ್ತಿದಂತೆಯೇ ಬಸ್ ಮಗುಚಿತು. ಬಸ್ ಕೆಳಗೆ ಸಿಲುಕಿ ಮಗು ಮೃತಪಟ್ಟಿತು.

ADVERTISEMENT

‘ನಿರ್ವಾಹಕನ ಅತಿವೇಗ ಮತ್ತು ಅಜಾರೂಗತೆಯ ಚಾಲನೆ ಘಟನೆಗೆ ಕಾರಣ’ ಎಂದು ಮಗುವಿನ ತಂದೆ ಶಂಕರ್ ನಾಯಕ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಅಜ್ಜಂಪುರದಲ್ಲಿ ರೈಲು ನೋಡಿ ಖುಷಿಪಟ್ಟು ಮಾತನಾಡಿದ್ದ ಪಾಪು ಕೆಲವೇ ನಿಮಿಷಗಳಲ್ಲಿ ಇಲ್ಲವಾದೆಯಲ್ಲಪ್ಪ’ ಎಂದು ರೋಧಿಸುತ್ತಿದ್ದ ಹೇಮಾವತಿ ಅವರ ಆಕ್ರಂದನ ಕರುಳು ಹಿಂಡುವಂತಿತ್ತು.

ಬಸ್ ಧರ್ಮಸ್ಥಳದಿಂದ ಕೂಡ್ಲಿಗಿ ಕಡೆಗೆ ಸಾಗುತ್ತಿತ್ತು. ಬಸ್‌ನಲ್ಲಿ 16 ಮಂದಿ ಪ್ರಯಾಣಿಸುತ್ತಿದ್ದರು. ಗಾಯಗೊಂಡವರು ಅಜ್ಜಂಪುರ, ತರೀಕೆರೆ, ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ನಿರ್ವಾಹಕ ಕೃಷ್ಣಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.